Sunday, October 2, 2022

Latest Posts

ಕೇಂದ್ರದ ಅಧ್ಯಯನ ತಂಡದಿಂದ ಕೊಡಗಿನ ಮಳೆ ಹಾನಿ ಪ್ರದೇಶಗಳ ಪರಿಶೀಲನೆ

ಹೊಸದಿಗಂತ ವರದಿ ಮಡಿಕೇರಿ:

ಪ್ರಸಕ್ತ ಸಾಲಿನ ಮುಂಗಾರು ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಆಗಿರುವ ಹಾನಿ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ತಂಡದ ಅಧಿಕಾರಿಗಳು ಬುಧವಾರ ಸಂಜೆ ಜಿಲ್ಲೆಗೆ ಆಗಮಿಸಿದ್ದು, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಡಿಕೇರಿ ತಾಲೂಕಿನ ಸೀಮೆಹುಲ್ಲು ಕಜೆ ಬಳಿ ಉಂಟಾಗಿರುವ ಭೂ ಕೂಸಿತ, ಕಾಫಿ ಬೆಳೆ ಹಾನಿ, ಮದೆನಾಡು ಬಳಿಯ ಕರ್ತೋಜಿಯ ರಾಷ್ಟ್ರೀಯ ಹೆದ್ದಾರಿ, ಕೊಯನಾಡು ಶಾಲೆ ಬಳಿ ಭೂಕುಸಿತ ಹಾಗೂ ಕಿಂಡಿ ಆಣೆಕಟ್ಟು ಪ್ರದೇಶವನ್ನು ಅಧಿಕಾರಿಗಳು ವೀಕ್ಷಿಸಿದರು.

ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಶೀಸ್ ಕುಮಾರ್ ನೇತೃತ್ವದ ತಂಡದಲ್ಲಿ ಕೇಂದ್ರ ಹಣಕಾಸು ಮಂತ್ರಾಲಯದ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಮಂತ್ರಾಲಯದ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ ತಂಡವು ಜಿಲ್ಲೆಯ ಭೂಕೂಸಿತ, ಬೆಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಮಾಹಿತಿ ಪಡೆದುಕೊಂಡಿತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಸೀಮೆಹುಲ್ಲು ಕಜೆ ಬಳಿ ಬರೆ ಕುಸಿತ, ಕಾಫಿ ಬೆಳೆಹಾನಿ, ಕೊಯಿನಾಡು ಶಾಲೆ ಬಳಿಯ ಭೂಕೂಸಿತ, ಕಿಂಡಿ ಆಣೆಕಟ್ಟು ಪ್ರದೇಶದಲ್ಲಿ ಪ್ರವಾಹ ಮತ್ತಿತರ ಬಗ್ಗೆ ಅಧ್ಯಯನ ಕೇಂದ್ರ ತಂಡಕ್ಕೆ ಸವಿವರವಾಗಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಭೂಕೂಸಿತ, ಬೆಳೆಹಾನಿ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು, ಅದರಂತೆ ಮಳೆಹಾನಿ ಅಧ್ಯಯನ ಕೇಂದ್ರ ತಂಡವು ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳ ವಿಕ್ಷಣೆ ಕೈಗೊಂಡಿದೆ ಎಂದರು.

ಕೇಂದ್ರದಿಂದ ಮೂರು ತಂಡ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಅಧ್ಯಯನ ಕೇಂದ್ರ ತಂಡವು ಮಳೆ ಹಾನಿ ಸಂಬಂಧ ಚರ್ಚಿಸಿದೆ ಎಂದು ಮನೋಜ್ ರಾಜನ್ ತಿಳಿಸಿದರು.
ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಮಹೇಶ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ಅನನ್ಯ ವಾಸುದೇವ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!