ಕೊಡಗು| ಲೋಕಾಯುಕ್ತ ದಾಳಿಗೊಳಗಾದ ಇನ್ಸ್ಪೆಕ್ಟರ್ ಮಹೇಶ್’ಗೆ ಕಾದಿದೆ ಮತ್ತೊಂದು ಕಂಟಕ: ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲು ಸಾಧ್ಯತೆ

ಹೊಸದಿಗಂತ ವರದಿ ಮಡಿಕೇರಿ:
ಕಳೆದ ಐದು ದಿನಗಳ ಹಿಂದೆಯಷ್ಟೇ ಲೋಕಾಯುಕ್ತ ದಾಳಿಗೊಳಗಾದ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಅವರಿಗೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆಗಳಿರುವುದಾಗಿ ಹೇಳಲಾಗಿದೆ.
ಲೋಕಾಯುಕ್ತ ತನಿಖೆಯ ಜೊತೆಗೆ ಇದೀಗ ಅರಣ್ಯ ಇಲಾಖೆ ಕೂಡಾ‌ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿರುವುದಾಗಿ ತಿಳಿದು ಬಂದಿದೆ.
ಕುಶಾಲನಗರದ ವೃತ್ತ ನಿರೀಕ್ಷಕರಾಗಿದ್ದು, ಇದೀಗ ಬೆಂಗಳೂರಿಗೆ ಗುಪ್ತದಳಕ್ಕೆ ವರ್ಗಾವಣೆಗೊಂಡಿರುವ ಇನ್ಸ್‌ಪೆಕ್ಟರ್ ಮಹೇಶ್ ಅವರ ಮನೆಗೆ ಲೋಕಾಯುಕ್ತ ದಾಳಿ ನಡೆದ‌ ಸಂದರ್ಭ ಮನೆಯಲ್ಲಾಗಲಿ, ಬ್ಯಾಂಕ್’ನಲ್ಲಾಗಲಿ ಭೌತಿಕವಾಗಿ ನಿರೀಕ್ಷಿತ ಪ್ರಮಾಣದ ವಸ್ತು ಹಾಗೂ ಹಣ, ಆಸ್ತಿ ಲಭ್ಯವಾಗಿಲ್ಲವಾದರೂ, ಅವರು ಕಟ್ಟಿಸಿರುವ ಭವ್ಯವಾದ ಮನೆ ಹಾಗೂ ಅದಕ್ಕೆ ಬಳಸಿರುವ ಮರಮುಟ್ಟುಗಳ ಮೌಲ್ಯವೇ ಕೋಟ್ಯಂತರ ರೂ.ಗಳಷ್ಟಿರುವುದಾಗಿ ಹೇಳಲಾಗಿದೆ‌. ಇದೀಗ ಈ ಹಣದ ಮೂಲದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭವ್ಯ ಬಂಗಲೆಗೆ ಹಣ ಎಲ್ಲಿಂದ?: ಸರ್ಕಾರದ ದಾಖಲೆಗಳ ಪ್ರಕಾರ ಮಹೇಶ್ ಅವರ ಮಾವ (ಪತ್ನಿ ಸೀಮಾ ಅವರ ತಂದೆ ) ರಾಜಶೇಖರ್ ಬಿಪಿಎಲ್ ಕಾರ್ಡ್ ಹೋಲ್ಡರ್ ಆಗಿದ್ದು, ಇವರು ತಮ್ಮ ಮಗಳಿಗೆ ಕುಶಾಲನಗರದಲ್ಲಿ ಒಂದರ ಪಕ್ಕದಲ್ಲೊಂದರಂತೆ 30*40 ಅಳತೆಯ ಮೂರು ನಿವೇಶನಗಳನ್ನು ಖರೀದಿಸಿ ಅವುಗಳನ್ನು ಮಗಳ ಹೆಸರಿಗೆ ದಾನ ಮಾಡಿರುವುದು ಲೋಕಾಯುಕ್ತ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಕೂಡಾ ಸಂಶಯಗಳಿಗೆ ಎಡೆ ಮಾಡಿದ್ದು, ಮಹೇಶ್ ಅವರು ಸಂಪಾದಿಸಿರುವ ಅಕ್ರಮ ಹಣವನ್ನು ತಮ್ಮ ಮಾವನವರ ಮೂಲಕ ನಿವೇಶನ ಖರೀದಿಗೆ ಬಳಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
1996ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸಕ್ಕೆ ಸೇರಿದ್ದ ಮಹೇಶ್ ನಂತರ ಇನ್ ಸರ್ವಿಸ್ ಮೂಲಕ 2005ರಲ್ಲಿ ಪಿಎಸ್‌ಐ ಆಗಿ ನೇಮಕಗೊಂಡ ಬಳಿಕ 17 ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ಆಸ್ತಿ ಸಂಪಾದಿಸಿರುವುದನ್ನು ಲೋಕಾಯುಕ್ತ ಇಲಾಖೆ ಗಮನಿಸಿದೆ.

ಮನೆ ಕಟ್ಟಲು ಬ್ಯಾಂಕೊಂದರಲ್ಲಿ ಮೊದಲಿಗೆ 30ಲಕ್ಷ ರೂ. ಸಾಲ ಪಡೆದಿದ್ದ ಮಹೇಶ್, ನಂತರ ಅದನ್ನು 50ಕ್ಕೆ ಏರಿಸಿಕೊಂಡಿದ್ದರೂ, ಬಳಿಕ ಒಂದೆರಡು ವರ್ಷಗಳಲ್ಲೇ 14 ಲಕ್ಷ ರೂ. ಸಾಲ ಮರುಪಾವತಿ ಮಾಡಿರುವುದು ದಾಖಲೆಗಳಲ್ಲಿ ಕಂಡು ಬಂದಿದ್ದು, ಈ ಹಣದ ಬಗ್ಗೆಯೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸಿಬಿಯಿಂದ ದಾಳಿ ನಡೆಯುವ ಮಾಹಿತಿ ಪಡೆದಿದ್ದ ಮಹೇಶ್, ಮನೆಯಲ್ಲಿ ಯಾವುದೇ ರೀತಿಯ ಬೆಲೆ ಬಾಳುವ ಪದಾರ್ಥಗಳನ್ನು ಇಡದಿರುವುದು ಲೋಕಾಯುಕ್ತ ದಾಳಿ ಸಂದರ್ಭ ಕಂಡು ಬಂದಿದ್ದರೂ, 2 ರಿಂದ 3 ಕೋಟಿ ರೂ. ಬೆಲೆ ಬಾಳುವ ಮೂರಂತಸ್ತಿನ ಅದ್ದೂರಿ ಐಷಾರಾಮಿ ಮನೆ, ಮನೆಯ ಗೋಡೆಯನ್ನು ಟೀಕ್ ಮರದಿಂದ ಅಲಂಕರಿಸಿರುವುದನ್ನು ಕಂಡು ಲೋಕಾಯುಕ್ತ ಪೊಲೀಸರೇ ದಂಗಾಗಿದ್ದಾರೆ. ಮನೆಯ ಗೋಡೆಗೆ ಬಳಸಿರುವ ತೇಗದ ಮರದ ಅಂದಾಜು ಮೌಲ್ಯವೇ ಅಂದಾಜು ಒಂದು ಕೋಟಿ ರೂ. ಆಗಲಿದೆ ಎನ್ನಲಾಗಿದೆ.

ಅರಣ್ಯ ಇಲಾಖೆಯಿಂದ ಕ್ರಮ: ಮೂಲಗಳ ಪ್ರಕಾರ‌ ಮಹೇಶ್ ಅವರು ನಿರ್ಮಿಸಿರುವ ಮನೆಯ ಮೌಲ್ಯವೇ 2-3 ಕೋಟಿಗಳಷ್ಟಿದ್ದು, ಮನೆಯ ಗೋಡೆಗೆ ಬಳಸಿರುವ ತೇಗ (ಟೀಕ್)ದ ಮರದ ಅಂದಾಜು ಮೌಲ್ಯವೇ ಸುಮಾರು 80 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳಷ್ಟಿರುವುದಾಗಿ ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮನೆಗೆ ಬಳಸಿರುವ ಟೀಕ್ ಮರದ ಅಂದಾಜು ಮಾಡಲು ಇದೀಗ ಅರಣ್ಯ ಇಲಾಖೆಯೂ ಪ್ರಕರಣ ದಾಖಲಿಸಲು ಮುಂದಾಗಿರುವುದಾಗಿ ಹೇಳಲಾಗಿದೆ.
ಮಹೇಶ್ ಅವರು ಬಳಸಿರುವ ಮರದ ಮೂಲ, ಅದರ ಮೌಲ್ಯಗಳ ಬಗ್ಗೆ ಮಾಹಿತಿ ಕಲೆಹಾಕಲಿರುವ ಅರಣ್ಯ ಇಲಾಖೆ ಈ ಕುರಿತ ವರದಿಯನ್ನು ಲೋಕಾಯುಕ್ತಕ್ಕೆ ನೀಡಲಿದೆ ಎನ್ನಲಾಗಿದೆ.

ಎಸಿಬಿ ಹಾಗೂ ಲೋಕಾಯುಕ್ತ ದಾಳಿ ಸಂದರ್ಭ ತಮ್ಮ ಅಕ್ರಮ ಬಯಲಾಗಬಾರದೆಂಬ ಕಾರಣಕ್ಕೆ ಮನೆಯಿಂದ ಬಹುತೇಕ ಪದಾರ್ಥಗಳನ್ನು ಸಾಗಿಸಿದ್ದಾರೆ ಎನ್ನಲಾಗಿದ್ದರೂ, ಲಕ್ಷಾಂತರ ರೂ. ಬೆಲೆ ಬಾಳುವ ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಪದಾರ್ಥಗಳು, ಮಹೇಶ್, ಪತ್ನಿ ಹಾಗೂ ಮಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ 19 ಲಕ್ಷ ರೂ. ನಗದು ಸೇರಿದಂತೆ ಇನ್ನಿತರೆ ಮೂಲಗಳಲ್ಲಿ ಹಣ ತೊಡಗಿಸಿರುವುದು ತನಿಖೆಯ ಸಂದರ್ಭ ಕಂಡುಬಂದಿದೆ.
ಅದೇ ರೀತಿ ಮನೆ ಕಟ್ಟಲು ಮಾವನ ಹೆಸರಿನಲ್ಲಿ ನಿವೇಶನ ಖರೀದಿಸಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!