ಪಾಕಿಸ್ತಾನಿ ಯುದ್ಧಟ್ಯಾಂಕುಗಳನ್ನು ನಾಶಪಡಿಸುತ್ತಲೇ ಆತ್ಮಾಹುತಿಗೈದ ʼಪರಮವೀರʼನ ಸ್ಫೂರ್ತಿಗಾಥೆ

-ಗಣೇಶ ಭಟ್‌ ಗೋಪಿನಮರಿ

1947-48ರ ಯುದ್ಧದಲ್ಲಿ ಕಾಶ್ಮೀರವನ್ನು ವಶಪಡಿಸಿಕೊಳ್ಳಲಾಗದೇ ಸೋತು ಸುಣ್ಣವಾಗಿತ್ತು ಪಾಕಿಸ್ತಾನ. ಆದರೆ ಭಾರತವನ್ನು ಗೆಲ್ಲಬೇಕೆಂಬ ಅದರ ಹುಚ್ಚುತನ ಇನ್ನೂ ಕಡಿಮೆಯಾಗಿರಲಿಲ್ಲ. ಈಗಲೂ ಕಡಿಮೆಯಾಗಿಲ್ಲ.. ಆ ಪ್ರಶ್ನೆ ಬೇರೆ ಬಿಡಿ. ಆದರೆ ಹೀಗೊಂದು ಹೀನಾಯ ಸೋಲಿನ ನಂತರವೂ ಪಾಕಿಸ್ತಾನ ಮತ್ತೆ ಭಾರತದ ಮೇಲೆ ಯುದ್ಧಕ್ಕೆ ಅಣಿಯಾಗಿತ್ತು. ಆದರೆ ಈ ಬಾರಿ ಯುದ್ಧದ ಚಿತ್ರಣ ತುಸು ಬದಲಿತ್ತು. ಕಾಶ್ಮೀರವನ್ನು ಸೇರಿ ಇಲ್ಲಿನ ಮುಸಲ್ಮಾನರನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಕಾಶ್ಮೀರದಲ್ಲಿ ದಂಗೆಯೆಬ್ಬಿಸೋ ಉದ್ದೇಶದಿಂದ ಗಡಿಯೊಳಗೆ ಒಳನುಸುಳುವ ಕಾರ್ಯಕ್ಕೆ ಪಾಕಿಸ್ತಾನ ಕೈ ಹಾಕಿತ್ತು. ಆದರೆ ಅದರ ಈ ಸಂಚನ್ನು ಗುರುತಿಸಿದ ಭಾರತೀಯ ಸೇನೆ ಪಾಕಿಸ್ತಾನದ ʼಆಪರೇಷನ್‌ ಜಿಬ್ರಾಲ್ಟರ್‌ʼಗೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸಿತು. ನುಸುಳುಕೋರರನ್ನು ಹೊಡೆದುಹಾಕತೊಡಗಿತು. ಇದು 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆ. ಈ ಯುದ್ಧದಲ್ಲಿ ಪಾಕಿಸ್ತಾನಿ ಶತ್ರುಗಳ ವಿರುದ್ಧ ಹೋರಾಡುತ್ತ ಅನೇಕ ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದಾರೆ. ಅಂಥಹ ಕೆಲ ವೀರಯೋಧರಲ್ಲಿ ಕೆಲವರು ಅಪ್ರತಿಮ ಶೌರ್ಯದಿಂದ ಹೋರಾಡಿ ʼಪರಮ ವೀರʼರು ಎನ್ನಿಸಿಕೊಂಡಿದ್ದಾರೆ. ಕಂಪನಿ ಕ್ವಾರ್ಟರ್‌ಮಾಸ್ಟರ್‌ ಹವಾಲ್ದಾರ್‌ ಅಬ್ದುಲ್‌ ಹಮೀದ್‌ ಅಂತಹ ಪರಮವೀರರಲ್ಲೊಬ್ಬ.

1933ರ ಜುಲೈ 1 ರಂದು ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಧಮುಪುರ್ ಗ್ರಾಮದಲ್ಲಿ ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಅಬ್ದುಲ್‌ ಹಮೀದ್‌ ಮುಂದೊಂದು ದಿನ ತಾಯಿ ಭಾರತಿಯ ರಕ್ಷಣೆ ಮಾಡುತ್ತ ದೇಶಕ್ಕಾಗಿ ಆತ್ಮಾರ್ಪಣೆ ಮಾಡುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಬಡತನದಲ್ಲಿಯೇ 8ನೇ ತರಗತಿಯ ಶಿಕ್ಷಣ ಪೂರೈಸಿದ ಅಬ್ದುಲ್‌ ನಂತರ ತಂದೆಯ ಬಟ್ಟೆಯಂಗಡಿಯಲ್ಲಿ ಕೆಲಸಮಾಡತೊಡಗುತ್ತಾನೆ. 1953ರ ಸಮಯದಲ್ಲಿ ವಾರಾಣಸಿಯಲ್ಲಿ ಸೇನೆಯ ರ್ಯಾಲಿಯಲ್ಲಿ ಭಾಗವಹಿಸಿ ಭಾರತೀಯ ಸೇನೆಗೆ ಸೇರಿಕೊಳ್ಳುತ್ತಾನೆ. ಆಗಿನ್ನೂ ಅಬ್ದುಲ್‌ ಗೆ 20 ವರ್ಷ ವಯಸ್ಸು. ನಾಸಿರಾಬಾದ್‌ ನ ಗ್ರೆನೇಡಿಯರ್‌ ರೆಜಿಮೆಂಟಲ್‌ ಸೆಂಟರಿನಲ್ಲಿ ತರಬೇತಿ ಮುಗಿಸಿದ ನಂತರ 4ನೇ ಗ್ರೆನೇಡಿಯರ್‌ ಬೆಟಾಲಿಯನ್‌ ಗೆ ನಿಯುಕ್ತಿಗೊಳ್ಳುತ್ತಾನೆ. ಆರಂಭದಲ್ಲಿ ರೈಫಲ್‌ಮನ್‌ ಆಗಿ ಕಾರ್ಯನಿರ್ವಹಿಸಿದ ಅಬ್ದುಲ್‌ ಹಮೀದ್‌ ಆಗ್ರಾ, ಅಮೃತಸರ, ಜಮ್ಮು ಮತ್ತು ಕಾಶ್ಮೀರ, ದೆಹಲಿ, NEFA ಮತ್ತು ರಾಮಗಢದಲ್ಲಿ ಸೇವೆಸಲ್ಲಿಸುತ್ತಾನೆ. 1962ರ ಭಾರತ-ಚೀನಾ ಯುದ್ಧದಲ್ಲಿ ಅವರ ಬೆಟಾಲಿಯನ್ ಚೀನಿಯರ ವಿರುದ್ಧ ನಮ್ಕಾ ಚು ಯುದ್ಧದಲ್ಲಿ ಭಾಗವಹಿಸಿ ಪರಾಕ್ರಮ ಮೆರೆದಿತ್ತು. ಯುದ್ಧದ ನಂತರ, ಅಂಬಾಲಾಗೆ ಹಿಂದಿರುಗಿ ಕಂಪನಿ ಕ್ವಾರ್ಟರ್ ಮಾಸ್ಟರ್ ಹವಾಲ್ದಾರ್ (CQMH) ಆಗಿ ನೇಮಕಗೊಳ್ಳುತ್ತಾನೆ.

ಟ್ಯಾಂಕ್ ವಿರೋಧಿ ವಿಭಾಗದಲ್ಲಿ ಐದು ವರ್ಷಗಳ ಸೇವೆ ಸಲ್ಲಿಸಿದ ನಂತರ, CQMH ಅಬ್ದುಲ್ ಹಮೀದ್ ಗೆ ಬಡ್ತಿ ನೀಡಲಾಯಿತು. ಅವರ ಕಂಪನಿಯ ಕ್ವಾರ್ಟರ್‌ಮಾಸ್ಟರ್ ಸ್ಟೋರ್‌ಗಳ ಉಸ್ತುವಾರಿ ವಹಿಸಲಾಯಿತು. 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧಮಾಡಬೇಕಾದ ಸನ್ನಿವೇಶ ಎದುರಾದಾಗ ಪರ್ವತ ಘಟಕದ ಭಾಗವಾಗಿ ಅಬ್ದುಲ್‌ ಹಮೀದ ಅವರ 4ನೇ ಗ್ರೆನೇಡಿಯರ್‌ ತಂಡವೂ ಕೂಡ ಧಾವಿಸಿತ್ತು. ಪಾಕಿಸ್ತಾನವನ್ನು ತಡೆಗಟ್ಟಲು ಭಾರತೀಯ ಪಡೆಗಳು ಖೆಮ್ ಕರಣ್-‌ ಅಮೃತಸರ ರಸ್ತೆಯಲ್ಲಿ ಯುದ್ಧತಂತ್ರವನ್ನು ಹೆಣೆದಿದ್ದರು. ಅದರ ಭಾಗವಾಗಿ ಅಬ್ದುಲ್‌ ಹಮೀದ್‌ ಕೂಡ ಇದ್ದರು. ಅದಾಗಲೇ 24 ಗಂಟೆಗಳ ಸತತ ಹೋರಾಟದಲ್ಲಿ ಅವರ ಬೆಟಾಲಿಯನ್‌ ಹೈರಾಣಾಗಿತ್ತು. ಆದರೆ ಭಾರತವನ್ನು ರಕ್ಷಿಸಬೇಕೆಂಬ ಉತ್ಕಟ ಬಯಕೆ ಅವರಿಗೆ ಶಕ್ತಿ ನೀಡಿತ್ತು. ಅಲ್ಲಿನ ಕಬ್ಬಿನ ಗದ್ದೆಗಳಲ್ಲಿ ಶತ್ರುವಿನ ಆಗಮನಕ್ಕಾಗಿ ಇವರ ತಂಡ ಕಾದುಕುಳಿತಿತ್ತು. ಶತ್ರು ಸೈನ್ಯ ಕಾಲಿಡುತ್ತಿದ್ದಂತೆ ತಮ್ಮ ಆರ್‌ಸಿಎಲ್‌ ಗನ್‌ ನಿಂದ ದಾಳಿ ನಡೆಸುತ್ತ ಅಬ್ದುಲ್‌ ಹಮೀದ್‌ ಶತ್ರುವಿನ ಮೇಲೆ ಮುಗಿಬಿದ್ದರು. ಆಕ್ರಮಣಕಾರಿಯಾಗಿದ್ದ ಅವರ ಹೋರಾಟಕ್ಕೆ ಶತ್ರು ಸೈನ್ಯದ ಎರಡು ಪ್ಯಾಟನ್ ಟ್ಯಾಂಕ್‌ಗಳು ಧ್ವಂಸಗೊಂಡಿದ್ದವು. ಆಧರೆ ಪಾಕಿಸ್ತಾನ ಸೇಬರ್‌ ಜೆಟ್‌ವಿಮಾನಗಳಿಂದಲೂ ದಾಳಿ ನಡೆಸಿತು. ಆದರೂ ಹೆದರದೇ ಹಮೀದ್‌ ಅವರ ತಂಡ ದಾಳಿ ಮುಂದುವರೆಸಿತು. ದಿನದ ಅತ್ಯಂದ ವೇಳೆ ಮತ್ತೆರಡು ಶತ್ರು ಟ್ಯಾಂಕುಗಳು ಧ್ವಂಸವಾಗಿದ್ದವು.

ಮಾರನೇ ದಿನ ಏಕಾ ಏಕಿ ಪಾಕಿಸ್ತಾನಿ ಪಡೆಗಳು ಫಿರಂಗಿ, ಶೆಲ್‌ ದಾಳಿಗಳನು ನಡೆಸಿ ಇವರಿದ್ದ ಜಾಗವನ್ನು ಆಕ್ರಮಿಸಿಕೊಳ್ಳಲು ಮುನ್ನುಗ್ಗಿದವು. ಈ ಸಂದರ್ಭವನ್ನು ಗಮನಿಸಿದ ಹಮೀದ್‌ ತಮ್ಮ ಜೀಪಿನ ಮೇಲೆ ಆರ್‌ಸಿಎಲ್‌ ಗನ್‌ ಹಾಕಿಕೊಂಡು ಶತ್ರುಗಳನ್ನು ಪಾರ್ಶ್ವದಿಂದ ಸುತ್ತುವರೆದು ದಾಳಿಯಿಟ್ಟರು. ಮೂರು ಪ್ಯಾಂಟನ್‌ ಟ್ಯಾಂಕಯಗಳನ್ನು ಒಂದರ ಹಿಂದೆ ಒಂದರಂತೆ ಧ್ವಂಸಗೊಳಿಸಿದ ಹಮೀದ್‌ ವೀರಾವೇಶದಿಂದ ಮುಂದಿನ ದಾಳಿಗೆ ಸಜ್ಜಾಗುತ್ತಿರುವಾಗ ಶತ್ರು ಸೈನ್ಯದ ಶೆಲ್‌ ಬಾಂಬ್‌ ದಾಳಿ ಇವರ ಜೀಪಿಗಪ್ಪಳಿಸಿತು. ಹೋರಾಡುತ್ತಲೇ ಅಬ್ದುಲ್‌ ಹಮೀದ್‌ ವೀರ ಮರಣವನ್ನಪ್ಪಿದರು. ಆದರೆ ಅವರ ಅತ್ಯುತ್ತಮ ಶೌರ್ಯವು ಯುದ್ಧದ ವಿಜಯಕ್ಕೆ ಕೊಡುಗೆ ನೀಡಿತು.

ಅವರ ಶೌರ್ಯ, ಸ್ಪೂರ್ತಿದಾಯಕ ನಾಯಕತ್ವ ಮತ್ತು ಸರ್ವೋಚ್ಚ ತ್ಯಾಗಕ್ಕಾಗಿ, ಅವರಿಗೆ ಪರಮ ವೀರ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಡುವ ಮೂಲಕ ಗೌರವ ಸಲ್ಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!