ಹೊಸದಿಗಂತ ವರದಿ,ನಾಗಮಂಗಲ :
ಗಣೇಶನಿಗೆ ಮೊದಲ ಪೂಜೆ ಎಂಬುದು ನಮ್ಮ ಧಾರ್ಮಿಕ ಪದ್ಧತಿ. ಹೀಗಿರುವಾಗ ಕೆಲ ದುಷ್ಕರ್ಮಿಗಳು ಗಣಪತಿ ವಿಸರ್ಜನೆ ವೇಳೆ ಅಪಮಾನ ಮಾಡುತ್ತಾರೆಂದರೆ ಇದು ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನ ಪ್ರತಿಫಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಹುಣಸೂರಿನಿಂದ ಧಾರವಾಡಕ್ಕೆ ಪ್ರಯಾಣಿಸುವ ಮಾರ್ಗಮಧ್ಯೆ ನಾಗಮಂಗಲ ಪಟ್ಟಣದ ಗರಡಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯ ಮತ್ತು ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಸಂಭವಿಸಿದ್ದ ಗಲಭೆುಂದ ಹಾನಿಗೊಳಗಾಗಿದ್ದ ಸಂತ್ರಸ್ತರ ಮನೆಗಳಿಗೆ ಭೇಟಿ ಕೊಟ್ಟ ಬಳಿಕ ಮಾತನಾಡಿದರು.
ಗಣಪತಿ ಮೆರವಣಿಗೆಗೆ ಕೆಲ ಕಿಡಿಗೇಡಿಗಳು ತೊಂದರೆ ಕೊಡುತ್ತಾರೆಂದರೆ ನಾವು ಯಾವ ದೇಶದಲ್ಲಿದ್ದೇವೆ ಎಂಬುದೇ ಅರ್ಥ ಆಗುತ್ತಿಲ್ಲ. ಸಾವಿರಾರು ವರ್ಷದಿಂದ ಗಣಪತಿಯನ್ನು ಪೂಜಿಸುತ್ತಿರುವ ಹಿಂದುಗಳು ತಾಳ್ಮೆಯಿಂದ ಇದ್ದಾರೆ. ಅದರ ಪ್ರತಿಫಲವೇ ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ಹಿಂಸೆ ನಡೆಯುತ್ತಿದೆ. ಅನ್ಯ ಕೋವಿನವರಿಗೂ ನಾವು ಬದುಕಲು ಬಿಟ್ಟಿದ್ದೇವೆ. ಅವರ ಯಾವುದೆ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಪಡಿಸಿಲ್ಲ ಹೀಗಿರುವಾಗ ನಮ್ಮ ಆಚರಣೆಗಳಿಗೆ ಏಕೆ ತೊಂದರೆ ಕೊಡುತ್ತಾರೆಂಬುದು ಅರ್ಥವಾಗುತ್ತಿಲ್ಲ ಎಂದು ಗುಡುಗಿದರು.