ಹೊಸದಿಗಂತ ವರದಿ,ನಾಗಮಂಗಲ :
ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಿರುವ ಬೆಂಗಳೂರು ಮತ್ತು ಮೈಸೂರು ವಿಭಾಗದ ಅರಣ್ಯ ಇಲಾಖೆಯ ಜಾಗೃತ ದಳದ ಅಧಿಕಾರಿಗಳ ತಂಡ ಮೂರು ಕೋಟಿಗೂ ಹೆಚ್ಚು ಮೌಲ್ಯದ ತಿಮಿಂಗಲ ವಾಂತಿ ಜೊತೆಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಟ್ಟಣದ ಪಡುವಲಪಟ್ಟಣ ರಸ್ತೆಯ ಶ್ರೀ ಬಡಗೂಡಮ್ಮದೇವಿ ದೇವಸ್ಥಾನದ ಪಕ್ಕದ ವಾಸಿ ಲೇಟ್ ಚಲುವರಾಜು ಪುತ್ರ ವಿನಯ್‌ಕುಮಾರ್(31) ಬಂಧಿತ ಆರೋಪಿ.
ಪಟ್ಟಣದ ಪಡುವಲಪಟ್ಟಣ ರಸ್ತೆಯಲ್ಲಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ವಿನಯ್‌ಕುಮಾರ್ ಕಳೆದ ಮೂರು ತಿಂಗಳಿಂದ ಮಿಲ್ಕ್ ಪಾರ್ಲರ್ ಮುಚ್ಚಿದ್ದನು. ಆಗಿದ್ದಾಂಗ್ಗೆ ಕಾರಿನಲ್ಲಿ ಓಡಾಡುತ್ತಿದ್ದ ಈತನ ಚಲನವಲನ ತಿಳಿದುಕೊಳ್ಳಲು ಕಳೆದ ಹದಿನೈದು ದಿನಗಳಿಂದಲೇ ಅರಣ್ಯ ಇಲಾಖೆಯ ಜಾಗೃತ ದಳದ ಸಿಬ್ಬಂದಿಗಳು ಪಟ್ಟಣದಲ್ಲೇ ಬೀಡು ಬಿಟ್ಟಿದ್ದರು ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ ವಿನಯ್‌ಕುಮಾರ್ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಅರಣ್ಯ ಇಲಾಖೆಯ ಜಾಗೃತದಳದ ಅಧಿಕಾರಿಗಳ ತಂಡ ಒಂದು ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಿದರು. ಈ ವೇಳೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 3ಕೋಟಿ ಮೌಲ್ಯದ 3ಕೆ.ಜಿ. ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಪತ್ತೆಯಾಗುತ್ತಿದ್ದಂತೆ ಮಾಲು ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಈ ದಂಧೆಯ ಮೂಲ ಜಾಡು ಕಂಡು ಹಿಡಿಯಲು ಯಾರಿಗೂ ಮಾಹಿತಿ ನೀಡದೆ ಆರೋಪಿಯನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆನ್ನಲಾಗಿದೆ.