ನಗರಸಭಾಧ್ಯಕ್ಷರಿಗೆ ಅಪಮಾನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

ಹೊಸ ದಿಗಂತ ವರದಿ, ಮಡಿಕೇರಿ:

ನಗರದ ಪ್ರಥಮ ಪ್ರಜೆಯಾದ ನಗರಸಭಾಧ್ಯಕ್ಷರ ಅವರ ಹೆಸರನ್ನು ಬೀಡಾಡಿ ಹಸುವಿನ ಮೇಲೆ ಬರೆದು ವಿಕೃತಿ ಮೆರೆದಿರುವ ವ್ಯಕ್ತಿ ಮತ್ತು ಅದಕ್ಕೆ ಕುಮ್ಮಕ್ಕು ಕೊಟ್ಟಿರುವವವರನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.

ಕೊಡಗಿನ ಏಕೈಕ ನಗರ ಸಭೆಯಾಗಿರುವ ಮಡಿಕೇರಿ ನಗರಸಭೆಯ ಮಹಿಳಾ ಅಧ್ಯಕ್ಷೆಯಾಗಿ ಕಳೆದ ಒಂದು ವರ್ಷಗಳ ಹಿಂದೆ ಆಯ್ಕೆಯಾದ ಅನಿತಾ ಪೂವಯ್ಯ ಅವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಈಗಾಗಲೇ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಪಾಲಿನ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇವರ ಜನಪರ ಕಾರ್ಯಗಳಿಂದ ಅಸೂಯೆಗೊಂಡ ಗುಂಪೊಂದು ಇವರ ಹೆಸರನ್ನು ಕೆಡಿಸುವ ಉದ್ದೇಶದಿಂದ ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದು, ಯಾವುದೇ ಕಾರಣಕ್ಕೂ ಅವರ ಈ ಪ್ರಯತ್ನ ಯಶಸ್ವಿಯಾಗದು‌; ಬದಲಾಗಿ ಈ ರೀತಿಯಾಗಿ ಮಾನಸಿಕ ಅಸ್ವಸ್ಥರಂತೆ ನಡೆದುಕೊಂಡವರ ಮುಂದೆ ನಗರ ಸಭಾಧ್ಯಕ್ಷರು ಮತ್ತಷ್ಟು ವೇಗವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ತಿಳಿಸಿದ್ದಾರೆ

ನಿರಂತರ ಮಳೆಯ ಕಾರಣದಿಂದ ರಸ್ತೆ ಕಾಮಗಾರಿಗಳು ಸೇರಿದಂತೆ ಅನೇಕ ಕಾಮಗಾರಿಗಳು ಸ್ವಲ್ಪ ತಡವಾಗಿದ್ದು, ಮುಂದಿನ ತಿಂಗಳಿನಿಂದ ಈಗಾಗಲೇ ಬಿಡುಗಡೆ ಆಗಿರುವ ನಾಲ್ಕನೇ ಹಂತದ ರೂ.40 ಕೋಟಿ ಹಣದಿಂದ ಟೆಂಡರ್ ಹಂತ ದಲ್ಲಿರುವ ಅನೇಕ ಅಭಿವೃದ್ಧಿ ಕೆಲಸಗಳು ಪ್ರತಿ ವಾರ್ಡ್’ನಲ್ಲೂ ನಡೆಯಲಿದೆ ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಮಡಿಕೇರಿ ನಗರದ ಅಭಿವೃದ್ಧಿ ಬಗ್ಗೆ ವಿಶೇಷ ಗಮನಹರಿಸಿದ್ದು ನಗರದ ವಿವಿಧ ಬಡಾವಣೆ ಗಳಲ್ಲಿ ಆಧುನಿಕ ಶೈಲಿಯ ಪಾರ್ಕ್’ಗಳು, ಅಂಗನವಾಡಿ ಕಟ್ಟಡಗಳು  ಸುಮಾರು ರೂ. 5 ಕೋಟಿ ವೆಚ್ಚದಲ್ಲಿ ನಗರಸಭಾ ಕಛೇರಿಯ ಪಕ್ಕದಲ್ಲಿರುವ ಕಾವೇರಿ ಕಲಾಕ್ಷೇತ್ರವನ್ನು ಸಂಪೂರ್ಣವಾಗಿ ಆಧುನಿಕ ರೀತಿಯಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು ಮುಂದೆ ನಗರದ ವಾಹನ ಪಾರ್ಕಿಂಗ್’ಗೂ ಶಾಶ್ವತ ಮತ್ತು ಆಧುನಿಕ ಮಾದರಿಯ ಯೋಜನೆಗೂ ಈಗಿನ ನಗರಸಭಾ ಆಡಳಿತ ಮಂಡಳಿ ಯೋಜನೆ ರೂಪಿಸಿದೆ.

ಮುಂದಿನ ದಿನ ಗಳಲ್ಲಿ ಪ್ರತಿಯೊಂದು ವಾರ್ಡ್’ನಲ್ಲೂ ಕೂಡ ನಗರಸಭಾ ನಿಧಿ ಸೇರಿದಂತೆ ಸರ್ಕಾರದ ವಿವಿಧ ಅನುದಾನವನ್ನು ಬಳಸಿಕೊಂಡು ವಿವಿಧ ಅಭಿವೃದ್ಧಿ ಕೆಲಸಕ್ಕೆ ನಗರಸಭೆಯ ಆಡಳಿತ ಮಂಡಳಿ ಮುಂದಾಗಿದೆ.
ಅನಾವಶ್ಯಕವಾಗಿ ನಗರ ಸಭೆಯ ಹೆಸರನ್ನು ಹಾಳು ಮಾಡಲು ಹವಣಿಸುತ್ತಿರುವ ಕೆಲ ದುಷ್ಟ ಶಕ್ತಿಗಳ ಪ್ರಯತ್ನ ಫಲ ನೀಡುವುದಿಲ್ಲ ಎಂದು ತಿಳಿಸಿರುವ ಜಿಲ್ಲಾ ಬಿಜೆಪಿ, ತಪ್ಪಿತಸ್ಥರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!