ಸಾಮಾಜಿಕ ಜಾಲತಾಣದಲ್ಲಿ ಫೀ.ಮಾ.ಕಾರ್ಯಪ್ಪ -ಜ.ತಿಮ್ಮಯ್ಯರ ಅವಹೇಳನ: ಆರೋಪಿ ವಿರುದ್ಧ ಕ್ರಮಕ್ಕೆ ಹೆಚ್ಚಿದ ಒತ್ತಡ

ಹೊಸದಿಗಂತ ವರದಿ ಮಡಿಕೇರಿ:

ಸಾಮಾಜಿಕ ಜಾಲತಾಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯನವರ ಕುರಿತು ಅವಹೇಳನಕಾರಿ ಸಂದೇಶವನ್ನು ಹರಿಯಬಿಟ್ಟಿರುವುದು ಬೆಳಕಿಗೆ ಬಂದಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

‘ಸಪ್ತ ಸಾಗರ(ಕಡಲು) ಎಂಬ ವಾಟ್ಸಾಪ್ ಗುಂಪಿನಲ್ಲಿ ಶ್ರೀವತ್ಸ ಭಟ್ ( ಮೊ9535957165) ಎಂಬ ಹೆಸರಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹಾಗೂ ಕೊಡವ ಜನಾಂಗವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಸಂದೇಶ ಹರಿದಾಡಿದ್ದು, ಇದನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು‌ ಬಿಡುಗಡೆ ಮಾಡಿರುವ ಸಂಸದ ಯದುವೀರ್ ಅವರು, ವಾಟ್ಸಾಪ್ ಗುಂಪುಗಳಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯನವರ ಕುರಿತು ಕೆಲವರು ತೀವ್ರ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ಇಂತಹ ಹೇಳಿಕೆಗಳು ಸಂಪೂರ್ಣವಾಗಿ ವಿರೋಧಿಸುತ್ತೇನೆ ಮತ್ತು ತೀವ್ರವಾಗಿ ಖಂಡಿಸುತ್ತೇನೆ. ಈ ಅಪಮಾನಕರ ವರ್ತನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಚಿಂತೆಗೊಳಗಾದ ನಾಗರಿಕರಿಂದ ಸಲ್ಲಿಸಲಾದ ಅಧಿಕೃತ ದೂರುಗಳಲ್ಲಿ ಉಲ್ಲೇಖಿಸಿರುವಂತೆ ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ಒತ್ತಾಯಿಸಿದ್ದೇನೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಮತ್ತು ಕೊಡಗಿನ ಶೌರ್ಯವಂತ ಸೈನಿಕರು ನಮ್ಮ ದೇಶವನ್ನು ರಕ್ಷಿಸಲು ಅಪಾರ ತ್ಯಾಗ ಮತ್ತು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಂಪರೆಯು ಕಾಲ ಮತ್ತು ರಾಜಕೀಯವನ್ನು ಮೀರಿರುವಂತದ್ದು, ಅತ್ಯುತ್ತಮ ಕರ್ತವ್ಯ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಪ್ರತಿಪಾದಿಸುವಂತದ್ದು. ದೇಶಕ್ಕೆ ನಿಸ್ವಾರ್ಥ ಸೇವೆಯ ಸಂಕೇತರಾದ ಇವರುಗಳನ್ನು ಅವಮಾನಿಸುವಂತಹ ಕೃತ್ಯಗಳು ನಡೆಯುತ್ತಿರುವುದು ಅತೀವ ನೋವಿನ ಸಂಗತಿ.

ಮೈಸೂರು ಮತ್ತು ಕೊಡಗಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಸಂಸದನಾಗಿ, ಈ ವೀರರ ಗೌರವವನ್ನು ಕಾಪಾಡಲು ನಾನು ದೃಢ ನಿರ್ಧಾರದಿಂದ ನಿಲ್ಲುತ್ತೇನೆ. ಅವರ ಸೇವೆ ಮತ್ತು ತ್ಯಾಗಗಳು ನಮ್ಮ ದೇಶದ ಭದ್ರತೆ ಮತ್ತು ಏಕತೆಯನ್ನು ರೂಪಿಸಿರುವ ಕಾರಣ, ಅವರಿಗೆ ನಮ್ಮ ಅಚಲ ಗೌರವವನ್ನು ನೀಡುವುದು ನಮ್ಮ ಕರ್ತವ್ಯ ಎಂದು ಯದುವೀರ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಎ.ಎಸ್.ಪೊನ್ನಣ್ಣ ಖಂಡನೆ:

ಭಾರತೀಯ ಸೇನೆಯ ಪ್ರಥಮ ಮಹಾ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಧೀಮಂತ ನಾಯಕ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಮತ್ತು ಭಾಷಾ ಅಲ್ಪಸಂಖ್ಯಾತರಾದ ಆದಿವಾಸಿ ಬುಡಕಟ್ಟು ಕೊಡವ ಜನಾಂಗದ ಬಗ್ಗೆ ವ್ಯಾಟ್ಸ್ಆ್ಯಪ್ ಮೂಲಕ ಅವಹೇಳನಕಾರಿ ಸಂದೇಶವನ್ನು ಹರಿಬಿಟ್ಟ ಕಿಡಿಗೇಡಿ ಕೃತ್ಯವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತೀವ್ರ ಖಂಡಿಸಿದ್ದಾರೆ. ಇದೊಂದು ರಾಜಕೀಯ ಪಿತೂರಿ ಎಂದು ಹೇಳಿರುವ ಅವರು ಕಿಡಿಗೇಡಿ ಕೃತ್ಯ ಎಸಗಿದ ಶ್ರೀವತ್ಸ ಭಟ್ ಎಂಬಾತನ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೊಡವ ಅಕಾಡೆಮಿ ಖಂಡನೆ:

ಶ್ರೀವತ್ಸ ಭಟ್ಟ್ ಹೆಸರಿನ ವ್ಯಕ್ತಿಯೊಬ್ಬ ಸಮಸ್ತ ಕೊಡವ ಜನಾಂಗ ಹಾಗೂ ಭಾರತೀಯ ಸೇನೆಯನ್ನು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದ ಮೂಲಕ ‘ಸಪ್ತ ಸಾಗರ (ಕಡಲು)’ ಹೆಸರಿನ ವಾಟ್ಸಪ್ ಗ್ರೂಪಿನಲ್ಲಿ ಬರೆದಿರುವುದನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಸೇನೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದ್ದು, ಆ ಮೂಲಕ ಆ ವ್ಯಕ್ತಿ ಕೊಡವ ಜನಾಂಗದ ಮೇಲಿನ ಅಸೂಯೆ ಹಾಗೂ ಕಡೆಗೆಟ್ಟ ಭಾವನೆಯನ್ನು ತೋರ್ಪಡಿಸಿದ್ದಾನೆ. ಅಂತೆಯೇ, ಜನಾಂಗೀಯ ತಾರತಮ್ಯ ಹಾಗೂ ಸಾಮಾಜಿಕ ಅಶಾಂತಿಯನ್ನು ತರಲು ಹುನ್ನಾರ ನಡೆಸಿದಂತಿದೆ. ಇದು ಆತನಲ್ಲಿ, ಸಮಾಜದಲ್ಲಿ ಅಶಾಂತಿ ತಲೆದೋರಲು ಬಿತ್ತುತ್ತಿರುವ ಬೀಜದಂತಿದೆ ಎಂದು ಟೀಕಿಸಿದ್ದಾರೆ.
ಇಂತಹ ಕಿಡಿಗೇಡಿ ವ್ಯಕ್ತಿಗಳನ್ನು ನಿಯಂತ್ರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಶಾಂತಿಯನ್ನು ಕದಡಲು ಅನುವು ಮಾಡಿಕೊಟ್ಟಂತಾಗುತ್ತದೆ .ಆದ್ದರಿಂದ ಇಂತಹ ಜಾತೀಯ ಕಲಹ ತಂದೊಡ್ಡುವ ಹೇಳಿಕೆಯನ್ನು ನಾನು ವೈಯಕ್ತಿಕವಾಗಿ ಖಂಡಿಸುವುದಲ್ಲದೆ, ಪೊಲೀಸ್ ಇಲಾಖೆಯು ಸಂಬಂಧಿಸಿದ ಕಿಡಿಗೇಡಿಯನ್ನು ತಮ್ಮ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೊಡವ ಸಮಾಜದಿಂದ ದೂರು:

ವೀರ ಸೇನಾನಿಗಳ ನಾಡಾದ ಕೊಡಗಿನ ವೀರ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಬಗ್ಗೆ ಶ್ರೀವಸ್ತ ಭಟ್ಟ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣ (ವಾಟ್ಸಾಆಪ್ ಗ್ರೂಪ್) ದಲ್ಲಿ ಅತಿ ಹೀನಾಯ ಪದ ಬಳಕೆ ಮಾಡಿರುವುದರ ವಿರುದ್ಧ ಮಡಿಕೇರಿ ಕೊಡವ ಸಮಾಜ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ.

ಇಡೀ ವಿಶ್ವವೇ ಹೆಮ್ಮೆ ಪಡುವ ವೀರಸೇನಾನಿಗಳಿಗೆ ಹಾಗೂ ಕೊಡವ ಜನಾಂಗಕ್ಕೆ ಅಪಮಾನ ಮಾಡಿರುವುದು ದೇಶಕ್ಕೆ ಅಪಮಾನ ಎಸಗಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಮಾಜದ ಪದಾಧಿಕಾರಿಗಳು, ಅಂತಹ ವ್ಯಕ್ತಿಯನ್ನು ಕೂಡಲೇ ಬಂಧಿಸುವ ಮೂಲಕ ಕಠಿಣಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಇದರೊಂದಿಗೆ ವಿವಿಧ ಸಂಘ ಸಂಸ್ಥೆಗಳೂ ಪ್ರಕರಣವನ್ನು ತೀವ್ರವಾಗಿ ಖಂಡಿಸಿವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!