ಉ.ಕೊರಿಯಾದಿಂದ ಖಂಡಾಂತರ ಕ್ಷಿಪಣಿ ದಾಳಿ: ಜಪಾನಿನಲ್ಲಿ ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವೆ ಯುದ್ಧಭೀತಿ ಆರಂಭವಾಗಿದ್ದು ಉತ್ತರಕೊರಿಯಾವು 23ಕ್ಕೂ ಹೆಚ್ಚು ಬಾಲಿಸ್ಟಿಕ್‌ ಕ್ಷಿಪಣಿಗಳನ್ನು ಹಾರಿಸಿದ್ದು ನೆರೆಯ ರಾಷ್ಟ್ರ ಜಪಾನ್‌ ಈ ಕುರಿತು ಕಳವಳ ವ್ಯಕ್ತಪಡಿಸಿದೆ.

ಉತ್ತರ ಕೊರಿಯಾ ಹಾರಿಸಿದ ಕ್ಷಿಪಣಿಗಳಲ್ಲಿ ಕೆಲವು ಜಪಾನಿನ ಪ್ರದೇಶದ ಮೂಲಕ ಹಾದು ಹೋಗಿವೆ ಎಂದು ಅಲ್ಲಿನ ಮುನ್ನೆಚ್ಚರಿಕೆಗಳು ತಿಳಿಸಿದ್ದು ಇದರಿಂದ ಉತ್ತರ ಮತ್ತು ಮಧ್ಯ ಜಪಾನ್‌ ಪ್ರದೇಶದಲ್ಲಿನ ನಿವಾಸಿಗಳಿಗೆ ಒಳಾಂಗಣದಲ್ಲೇ ಆಶ್ರಯ ಪಡೆಯುವಂತೆ ಎಚ್ಚರಿಕೆ ನೀಡಲಾಯಿತು ಎಂದು ಮೂಲಗಳು ವರದಿ ಮಾಡಿವೆ.

ಮುಂಜಾನೆ, ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರ ಕಚೇರಿಯು ಉತ್ತರ ಮತ್ತು ಮಧ್ಯ ಪ್ರಾಂತಗಳಾದ ಮಿಯಾಗಿ, ಯಮಗಾಟಾ ಮತ್ತು ನಿಗಾಟಾದಲ್ಲಿನ ನಿವಾಸಿಗಳಿಗೆ ಎಚ್ಚರಿಕೆಗಳನ್ನು ನೀಡಿತ್ತು, ಅವರು ದೃಢವಾದ ಕಟ್ಟಡಗಳು ಅಥವಾ ಭೂಗತದಲ್ಲಿ ಆಶ್ರಯ ಪಡೆಯಲು ಸೂಚಿಸಿದರು. ಕ್ಷಿಪಣಿ ಎಚ್ಚರಿಕೆಯ ನಂತರ ಆ ಪ್ರದೇಶಗಳಲ್ಲಿ ಬುಲೆಟ್ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶೀಘ್ರದಲ್ಲೇ ಪುನರಾರಂಭಿಸಲಾಗಿದೆ.

ಆರಂಭಿಕವಾಗಿ ಕ್ಷಿಪಣಿಗಳು ಹಾದು ಹೋಗಿರುವುದನ್ನು ಜಪಾನಿನ ರಾಡಾರ್‌ ಗಳು ಪತ್ತೆ ಹಚ್ಚಿವೆ ಎನ್ನಲಾಗಿತ್ತು. ಇದು ತಪ್ಪಾಗಿದೆ ಎಂದು ಟೋಕಿಯೋ ಹೇಳಿದೆ. ಆದರೆ ಉ.ಕೊರಿಯಾ ಹಾಗೂ ದ.ಕೊರಿಯಾ ನಡುವಿನ ಯುದ್ಧ ಭೀತಿಯು ಪರೋಕ್ಷವಾಗಿ ಜಪಾನಿಗೆ ಎಚ್ಚರಿಕೆಯಿಂದಿರುವ ಸಂದೇಶ ರವಾನಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!