ಇಳಕಲ್ ಸೀರೆ ಸಹಿತ ನೇಕಾರರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್: ಸಿಎಂ ಬೊಮ್ಮಾಯಿ ಭರವಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಳಕಲ್ ಸೀರೆ ಸೇರಿದಂತೆ ನೇಕಾರರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನೇಕಾರ‌ರಿಂದ ಸುವರ್ಣ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು ವಿಶೇಷ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಜವಳಿ ನೀತಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗುವುದು. ಅತಿಹೆಚ್ಚು ಜವಳಿ ರಫ್ತು ಮಾಡುವ ರಾಜ್ಯ ಕರ್ನಾಟಕವಾಗಿದೆ. ಇಳಕಲ್ ಸೀರೆ ಸಾಕಷ್ಟು ಪ್ರಸಿದ್ದಿ ಹೊಂದಿದೆ. ಈ ಸೀರೆಗಳು ರಾಷ್ಟ್ರಮಟ್ಟಕ್ಕೆ ಬ್ರ್ಯಾಂಡಿಂಗ್ ಆಗಬೇಕು. ಅದಕ್ಕಾಗಿ ಅಮೆಜಾನ್‌ನಂತಹ ಆನ್ ಲೈನ್ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.

ನೇಕಾರ ಸಮ್ಮಾನ ಯೋಜನೆಯನ್ನು ವಿದ್ಯುತ್ ಕೈಮಗ್ಗದಲ್ಲಿ ಕೆಲಸ ಮಾಡುವ ನೇಕಾರರಿಗೂ ವಿಸ್ತರಿಸಲಾಗಿದೆ.ಈ ಮೂಲಕ ಜನವರಿ 14ರಂದು ನೇಕಾರರಿಗೆ ಸಂಕ್ರಾಂತಿ ಹಬ್ಬದ ಕಾಣಿಕೆಯಾಗಿ ನೀಡಲಾಗುವುದು. ಅದೇ ರೀತಿ ವೃತ್ತಿಪರ ನೇಕಾರ ಸಮುದಾಯಕ್ಕೆ ನೀಡುತ್ತಿದ್ದ ಶೇ. 30ರ ಸಹಾಯಧನವನ್ನು ಶೇ. 50ಕ್ಕೆ ಹೆಚ್ಚಿಸಲಾಗಿದೆ. ನೇಕಾರರ ಕಾಲೊನಿಗಳಲ್ಲಿ ವಾಸಿಸುವವರಿಗೆ ರಹವಾಸಿ ಪತ್ರಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.

ಅದೇ ರೀತಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮನೆಯಲ್ಲಿ ನೇಕಾರಿಕೆ ಮಾಡುವುದನ್ನು ಗುಡಿಕೈಗಾರಿಕೆ ಎಂದು ಪರಿಗಣಿಸಿ ವಿನಾಯಿತಿ ಮಾಡಲಾಗಿದೆ. ನೇಕಾರರ ಉತ್ಪನ್ನಗಳು ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೀಡಲಾಗುವ ಸಮವಸ್ತ್ರಗಳ ತಯಾರಿಕೆಗೆ ಡಿಸೆಂಬರ್ ನಲ್ಲಿಯೇ ಆದೇಶ ನೀಡಲಾಗುವುದು. ಸರ್ಕಾರ ನೇಕಾರ ನಿಗಮಗಳ ಉತ್ಪಾದನಾ ಸಾಮರ್ಥ್ಯದ ಅನುಗುಣವಾಗಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಿ, ಉಳಿದ ಪ್ರಮಾಣಕ್ಕೆ ಟೆಂಡರ್ ಕರೆಯಲಾಗುವುದು. ವಿವಿಧ ಇಲಾಖೆಗಳ ಸಮವಸ್ತ್ರದ ಅಗತ್ಯತೆಯ ಶೇ. 25ರಷ್ಟನ್ನು ಕೈಮಗ್ಗ ನಿಗಮದ ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.

ನೇಕಾರರ ಒಳಿತಿಗಾಗಿ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು. ವಿದ್ಯುತ್ ಮಗ್ಗ ಹಾಗು ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ಹಾಗೂ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ. ಅಸಂಘಟಿತ ವಲಯದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ವೃತ್ತಿಪರ ಕೂಲಿ ನೇಕಾರರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಈ ಸೌಲಭ್ಯಗಳನ್ನು ದೊರೆಯುವ ಯೋಜನೆಯನ್ನು ಮುಂದಿನ ಆಯವ್ಯಯದಲ್ಲಿ ರೂಪಿಸಲಾಗುವುದು. ಘೋಷಣೆ ಮಾಡಿರುವ ಯೋಜನೆಗಳಿಗೆ ತಕ್ಷಣವೇ ಆದೇಶಗಳನ್ನು ಹೊರಡಿಸಲಾಗುವುದು ಎಂದರು.

ನೇಕಾರರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಜನವರಿ ಮೊದಲ ವಾರದಲ್ಲಿ ವಿತರಿಸಲಾಗುವುದು. ಆರ್ಥಿಕ ನೆರವುಗಳನ್ನು ನಿಗದಿತ ಅವಧಿಯೊಳಗೆ ಪೂರೈಸಲಾಗುವುದು. ನೇಕಾರರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ನೇಕಾರರ ತಯಾರು ಮಾಡಿದ ಸೀರೆ 50 ಸಾವಿರಕ್ಕೆ ಮಾರಾಟವಾಗಬಹುದು. ಆದರೆ ನೇಕಾರರಿಗೆ ಲಾಭಾಂಶ ದೊರೆಯುವುದಿಲ್ಲ. ನೇಕಾರಿಕೆ ಒಂದು ಕಲೆ. ನೇಕಾರರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸರ್ಕಾರ ಈ ಎಲ್ಲ ಯೋಜನೆಗಳನ್ನು ಕಟ್ಟಕಡೆಯ ನೇಕಾರನಿಗೂ ತಲುಪುವಂತೆ ಸಮುದಾಯದ ಮುಖಂಡರು ನೋಡಿಕೊಳ್ಳಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!