ಹೊಸದಿಗಂತ ಡಿಜಿಟಲ್ ಡೆಸ್ಕ್:
16ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದಿನಿಂದ ಆರಂಭವಾಗಲಿದೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ ಐದು ಸಿನಿಮಾ ಸಂಬಂಧಿತ ಪುಸ್ತಕಗಳನ್ನು ಉತ್ಸವ ಕೈಪಿಡಿಯೊಂದಿಗೆ ಡಾ. ಶಿವರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ನಟ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್ ಜಿ, ಪೊಲಿಷ್ ಸಂಸ್ಥೆಯ ನಿರ್ದೇಶಕಿ ಮಲ್ಗೋರ್ಜ್ತಾ ವೆಜ್ಸಿ-ಗೋಲೆಬಿಯಾಕ್, ನಟಿ ಪ್ರಿಯಾಂಕಾ ಮೋಹನ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ. ನರಸಿಂಹಲು ಭಾಗವಹಿಸಲಿದ್ದಾರೆ.
ಮಾರ್ಚ್ 2 ರಂದು ಓರಿಯನ್ ಮಾಲ್‌ನ 11 ಸ್ಕ್ರೀನ್ ಗಳಲ್ಲಿ ಚಲನಚಿತ್ರ ಪ್ರದರ್ಶನಗಳು ಪ್ರಾರಂಭವಾಗಲಿದ್ದು, ಮಾರ್ಚ್ 3 ರಂದು ಓರಿಯನ್ ಮಾಲ್ ನಲ್ಲಿ ವಿಶ್ವ ಕನ್ನಡ ಸಿನೆಮಾ ದಿನದ ಗೌರವಾರ್ಥ ಕನ್ನಡದ ಮೊದಲ ಟಾಕಿ ಸಿನೆಮಾ ಸತಿ ಸುಲೋಚನಾ ಸ್ಕ್ರೀನಿಂಗ್ ನಡೆಯಲಿದೆ.
ಕಲಾವಿದರ ಸಂಘ, ಡಾ. ರಾಜ್‌ಕುಮಾರ್ ಭವನ ಮತ್ತು ಸುಚಿತ್ರ ಥಿಯೇಟರ್ ನಲ್ಲಿ ಹೆಚ್ಚುವರಿ ಪ್ರದರ್ಶನಗಳು ನಡೆಯಲಿವೆ. 15 ವಿಭಾಗಗಳಲ್ಲಿ 60 ದೇಶಗಳಿಂದ 200 ಕ್ಕೂ ಹೆಚ್ಚು ಚಲನಚಿತ್ರಗಳು ಉತ್ಸವದ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ.