ಬಿಯಾಂಡ್ ಬೆಂಗಳೂರು ಹೂಡಿಕೆಗಾಗಿ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಆಹ್ವಾನ : ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು: ಬಿಯಾಂಡ್ ಬೆಂಗಳೂರು ಯೋಜನೆಯಡಿ ಯಾದಗಿರಿ, ಕಲಬುರಗಿ, ತುಮಕೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು ನಗರ ಸಹಿತ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅಂತಾರಾಷ್ಟ್ರೀಯ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ -2022ಕ್ಕೆ ಸಂಬಂಸಿ ಅವರು ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸೀಮೆನ್ಸ್ ಹೆಲ್ದೀನಿಯರ್ಸ್, ಅದಾನಿ ಗ್ರೂಪ್, ಡಾಲ್ಮಿಯಾ ಸಿಮೆಂಟ್, ಜಾನ್‌ಸನ್ ಕಂಟ್ರೋಲ್ಸ್‌, ಹನಿವೆಲ್, ಐಬಿಎಂ, ಐಕಿಯ ಸ್ಟೋರ್ಸ್, ಪೇಪಾಲ್, ಅಮೆರಿಕದ ಇಂಡಿಯಾಸ್ಪೊರಾ, ಸಿಂಗಾಪುರದ ಇಂಡೊರಮಾ, ಹಿಟಾಚಿ ಜಪಾನ್, ವಿಪಿಎಸ್ ಹೆಲ್ತ್‌ಕೇರ್ ಮುಂತಾದ 25 ಸಂಸ್ಥೆಗಳೊಂದಿಗೆ ರಾಜ್ಯದ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು ಎಂದರು.

ಆರ್ಸೆಲರ್ ಮಿತ್ತಲ್ ಸಂಸ್ಥೆ ವಿಜಯಪುರದಲ್ಲಿ ಸೌರ ಹಾಗೂ ಪವನಶಕ್ತಿಯ ಹ್ರೈಬ್ರೀಡ್ ಯೋಜನೆಗೆ 6000 ಕೋಟಿ ರೂ.ಗಳ ಬಂಡವಾಳ ಹೂಡಲು ಆಸಕ್ತಿ ತೋರಿದೆ. ವಿವಿಧ ಸಂಸ್ಥೆಗಳ ಪ್ರಮುಖರೊಂದಿಗೆ ಧಾರವಾಡದಲ್ಲಿ ಫಾರ್ಮಾ ಮತ್ತು ಎಫ್ಎಂಸಿಜಿ ವಲಯದಲ್ಲಿ ಹೂಡಿಕೆಗೆ, ಕಲಬುರಗಿ ಮತ್ತು ವಿಜಯಪುರದಲ್ಲಿ ಮೆಗಾ ಜವಳಿ ಪಾರ್ಕ್, ಮೆಟ್ರೋ ಟ್ರೈನ್ ಕೋಚ್ ನಿರ್ಮಾಣ ಘಟಕ, ಫಾರ್ಮಾ ಕ್ಷೇತ್ರಗಳಲ್ಲಿ ಹೂಡಿಕೆ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಸಿಎಂ ತಿಳಿಸಿದರು.

₹ 60000 ಕೋಟಿ ಬಂಡವಾಳ ಹೂಡಿಕೆಗೆ ಬದ್ಧತೆ:
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿದ್ದು, ಅಂದಾಜು 60 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಬದ್ಧತೆ ತೋರಿವೆ. ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಪೂರಕ ಪರಿಸರ, ನೀತಿ ನಿಯಮಗಳು, ತಂತ್ರಜ್ಞಾನ ಆಧಾರ, ಕೌಶಲಯುತ ಮಾನವಸಂಪನ್ಮೂಲ, ಆರ್ ಎಂಡ್ ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ ಪ್ರೋತ್ಸಾಹಕಗಳು, ಭೂಮಿಯ ಲಭ್ಯತೆಗಳಿಂದಾಗಿ ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ ಕರ್ನಾಟಕದ ರಾಜ್ಯದ ಮೇಲೆ ವಿಶ್ವಾಸ ಮೂಡಿಸಿದೆ ಎಂದರು.

ರಾಜ್ಯದಲ್ಲಿ ಹೂಡಿಕೆ ಮಾಡುವವರಿಗೆ ಮೂಲಭೂತಸೌಕರ್ಯ, ಉದ್ದಿಮೆ ಸ್ಥಾಪನೆಗೆ ಸರಳೀಕೃತ ಪ್ರಕ್ರಿಯೆಗಳು, ಈಸ್ ಆಫ್ ಡೂಯಿಂಗ್ ಬಿಸನೆಸ್ ನೀತಿಯ ಮೂಲಕ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಇಲ್ಲಿ ಉದ್ಯಮ ಆರಂಭಿಸಲು ಅರ್ಜಿ ಹಾಕಿದ ತಕ್ಷಣ ಕನ್ಸ್ಟ್ರಕ್ಷನ್ ಆರಂಭಿಸಿ, ಎರಡು ವರ್ಷದೊಳಗೆ ಕ್ಲಿಯರೆನ್ಸ್ ತೆಗೆದುಕೊಳ್ಳಬಹುದು ಎಂದು ಸರಳೀಕೃತ ನೀತಿಯನ್ನು ಸಿಎಂ ವಿವರಿಸಿದರು.

ಕರ್ನಾಟಕ ಸರ್ಕಾರ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಹಮ್ಮಿಕೊಂಡಿರುವ ಯೋಜನೆಯಂತೆ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲಸೌಲಭ್ಯ ನೀಡಲು ಆಕ್ಸಿಸ್ ಬ್ಯಾಂಕ್ ಸಂಸ್ಥೆಗೆ ಆ್ಯಂಕರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುವಂತೆ ಕೋರಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!