Saturday, December 9, 2023

Latest Posts

ಕಾಂಗ್ರೆಸ್‍ ಅವಧಿಯ ಹಗರಣಗಳ ಬಗ್ಗೆ ತನಿಖೆ, ಸೂಕ್ತ ಕಾನೂನು ಕ್ರಮ: ಪಿ.ರಾಜೀವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಿಎಸ್‍ಐ ನೇಮಕಾತಿ ಅಕ್ರಮದ ಕುರಿತಂತೆ ಪಾರದರ್ಶಕ ತನಿಖೆ ನಡೆಸಲಾಗಿದೆ. ಈ ಮೂಲಕ ಅಕ್ರಮಗಳ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂಬುದನ್ನು ಬಿಜೆಪಿ ಸಾಬೀತುಪಡಿಸಿದೆ. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ದೊಡ್ಡ ದೊಡ್ಡ ಹಗರಣಗಳು ನಡೆದಿವೆ. ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ಅಕ್ರಮ ನೇಮಕಾತಿಗಳ ಕುರಿತಾದ ಮಾಹಿತಿಯನ್ನು ಬಿಜೆಪಿ ಜನತೆ ಮುಂದಿಡಲಿದೆ. ನಾವು ಹಿಂದಿನ ಅಕ್ರಮಗಳ ತನಿಖೆ ಮಾಡಿ ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಗೆ ತರಲಿದ್ದೇವೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಅವಧಿಯಲ್ಲಿ ನಡೆದ ನೇಮಕಾತಿಯಲ್ಲಿ ಸಾಲು ಸಾಲಾಗಿ ಅಕ್ರಮಗಳು ನಡೆದಿವೆ. ಅವು ಈಗ ಬೆಳಕಿಗೆ ಬರುತ್ತಿವೆ. 2013ರಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಪರೀಕ್ಷೆಯನ್ನೇ ಬರೆಯದವರಿಗೆ ನೇಮಕಾತಿ ಆದೇಶ ಕೊಡಲಾಗಿದೆ. ಅಂಥವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶಿಕ್ಷಣ ಸಚಿವ ನಾಗೇಶ್ ಅವರು ಇದರ ಸುಳಿವು ಪಡೆದು ವಿವರವಾದ ವರದಿ ಪಡೆದಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕರ ಹುದ್ದೆ ನಿರ್ವಹಿಸುತ್ತಿದ್ದ ಸುಮಾರು 30 ಜನರನ್ನು ದಸ್ತಗಿರಿ ಮಾಡಿದ್ದಾರೆ ಎಂದರು. ಈ ಅಕ್ರಮ ನೇಮಕಾತಿಗೆ ಕಾರಣ ಯಾರು? ಹೀಗೆ ಎಷ್ಟು ಜನ ಕಾಂಗ್ರೆಸ್ಸಿಗರನ್ನು ಅವರ ಅವಧಿಯಲ್ಲಿ ನೇಮಕ ಮಾಡಿರಬಹುದು? ಹಾಗಿದ್ದರೆ ರಾಜ್ಯದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಇವರು ಯಾವ ರೀತಿ ನ್ಯಾಯ ಕೊಟ್ಟಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಎಂದರೆ ಅಕ್ರಮಗಳ ಗಂಗೋತ್ರಿ: 
ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ಅಕ್ರಮ ನೇಮಕಾತಿಗಳನ್ನು ಬಿಜೆಪಿಯು ಜನತೆ ಮುಂದಿಡಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಹಿಂದಿನಂತೆ ಅನ್ಯಾಯ ಮತ್ತು ಅಕ್ರಮಕ್ಕೆ ಅವಕಾಶವಿಲ್ಲ. ಹಿಂದಿನ ಅಕ್ರಮಗಳ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಈ ಹಿಂದೆ ಅಕ್ರಮ ನಡೆದ ಕುರಿತಾಗಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ದೂರಿನಲ್ಲಿ ಮಂಜುನಾಥ ಎಂಬಾತ 2013ರಿಂದ 2017ರವರೆಗೆ ಡಿವೈಎಸ್ಪಿ, ಪಿಎಸ್‍ಐ, ಎಫ್‍ಡಿಸಿ, ಎಸ್‍ಡಿಸಿ ಮತ್ತಿತರ ಹುದ್ದೆಗಳನ್ನು ಕೊಡಿಸುವುದಾಗಿ ಸುಮಾರು 18 ಕೋಟಿ ಹಣವನ್ನು ಸಾರ್ವಜನಿಕರಿಂದ ವಸೂಲಿ ಮಾಡಿದ್ದು, ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದರ ಬಗ್ಗೆ ವಿವರಿಸಲಾಗಿತ್ತು. ಲಕ್ಷ್ಮೀಕಾಂತ್ ಮತ್ತು ಲೋಕೇಶ್ ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿತ್ತು. ಆಗಿನ ಸರಕಾರವು ಆಳವಾಗಿ ತನಿಖೆ ಮಾಡಿದ್ದರೆ ಮುಂದಿನ ಹಗರಣವನ್ನು ತಡೆಯಬಹುದಿತ್ತು. ಆದರೆ ಈ ಪ್ರಕರಣವನ್ನು ಕಾಟಾಚಾರದಲ್ಲಿ ಇತ್ಯರ್ಥ ಮಾಡಿದ್ದರು ಎಂದು ಆರೋಪಿಸಿದರು.
ಇಂತಹ ಎಲ್ಲ ಅಕ್ರಮಗಳನ್ನು ಮುಚ್ಚಿಡಲು ಲೋಕಾಯುಕ್ತ ಬಾಗಿಲು ಮುಚ್ಚಿ, ಎಸಿಬಿ ತೆರೆದು ತಮ್ಮ ಅಕ್ರಮಗಳನ್ನು ಅಧಿಕೃತಗೊಳಿಸಿದ ಮತ್ತು ಅಕ್ರಮಗಳನ್ನು ಸಕ್ರಮ ಮಾಡಿದ ಅಪಕೀರ್ತಿ ಸಿದ್ದರಾಮಯ್ಯರ ನೇತೃತ್ವದ ಸರಕಾರಕ್ಕಿದೆ. ಕಾಂಗ್ರೆಸ್ ಎಂದರೆ ಅಕ್ರಮಗಳ ಗಂಗೋತ್ರಿ ಎಂದು ಟೀಕಿಸಿದರು.
ಕಾಂಗ್ರೆಸ್‌ ನಿಂದ ಪ್ರತಿಭಾವಂತರಿಗೆ ಅನ್ಯಾಯ: 
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, 2012-13ನೇ ಸಾಲಿನಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿ 3,407 ಹುದ್ದೆಗಳಿಗೆ ಹಾಗೂ 2014-15ರಲ್ಲಿ 1,689 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ನೇಮಕಾತಿ ಸಂದರ್ಭದಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡದೆ ಹೆಚ್ಚು ಅಂಕ ಪಡೆಯದ ಕೆಲವು ಅಭ್ಯರ್ಥಿಗಳಿಗೂ ಹುದ್ದೆ ಲಭಿಸಿದೆ. ಪರೀಕ್ಷೆ ಬರೆಯದವರಿಗೂ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿದರು.
2012-13ನೇ ಸಾಲಿನಲ್ಲಿ ಒಬ್ಬರು ಮತ್ತು 2014-15ರಲ್ಲಿ 11 ಜನರು ಅಕ್ರಮವಾಗಿ ನೇಮಕವಾದುದು ದೃಢಪಟ್ಟಿದೆ ಎಂದು ತಿಳಿಸಿ, ಎಫ್‍ಐಆರ್ ಪ್ರತಿಗಳನ್ನು ಅವರು ಒದಗಿಸಿದರು.  ಹಿಂದೆ ಪೊಲೀಸ್ ಇಲಾಖೆ ನೇಮಕಾತಿಯಲ್ಲೂ ಅಕ್ರಮಗಳಾಗಿವೆ. ಮುಂದಿನ ದಿನಗಳಲ್ಲಿ ವಿವರ ನೀಡಲಿದ್ದೇವೆ ಎಂದು ತಿಳಿಸಿದರು.
ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!