ಹೂಡಿಕೆದಾರರ ಸಮಾವೇಶ ಬಿಜೆಪಿ ಸರ್ಕಾರದ ಚುನಾವಣಾ ಗಿಮಿಕ್: ಕೆಪಿಸಿಸಿ ಆರೋಪ

ಹೊಸ ದಿಗಂತ ವರದಿ, ಮಡಿಕೇರಿ:

ಚುನಾವಣೆಗೆ ನಾಲ್ಕು ತಿಂಗಳಷ್ಟೇ ಬಾಕಿ ಉಳಿದಿರುವ ಈ ಸಮಯದಲ್ಲಿ ಬೆಂಗಳೂರಿನಲ್ಲಿ ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’(ಜಿಐಎಂ) ನಡೆಸುತ್ತಿರುವುದು ಬಿಜೆಪಿ ಸರ್ಕಾರದ ‘ಚುನಾವಣಾ ಗಿಮಿಕ್’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಉದ್ಯಮಿಗಳ ಪರವಾಗಿರುವ ಬಿಜೆಪಿ ಸರ್ಕಾರ, ಚುನಾವಣೆ ಹೊಸ್ತಿಲಲ್ಲಿ ಇರುವ ಹಂತದಲ್ಲಿ ನಡೆಸುತ್ತಿರುವ ಈ ಜಿಐಎಂ ಸಮಾವೇಶದ ಪ್ರಚಾರಕ್ಕೆ 200 ಕೋಟಿ ರೂ.ಗಳನ್ನು ಬಳಕೆ ಮಾಡುತ್ತಿದೆ. ಇಂತಹ ಸಮಾವೇಶಗಳು ಹಿಂದೆಯೂ ನಡೆದಿದ್ದು, ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯಾಗಲಿ, ಉದ್ಯೋಗ ಸೃಷ್ಟಿಯಾಗಲಿ ನಡೆದಿಲ್ಲವೆಂದು ಟೀಕಿಸಿದರು.
ಕೈಗಾರಿಕೆಗಳ ಸ್ಥಾಪನೆಗೆಂದು ಕಳೆದ ಮೂರೂವರೆ ವರ್ಷಗಳ ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಳ್ಳಾರಿ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ರೈತರ 3 ಲಕ್ಷ ಎಕರೆ ಪ್ರದೇಶವನ್ನು ಸರ್ಕಾರ ವಶಪಡಿಸಿಕೊಂಡಿದ್ದು, ಇಲ್ಲಿ ಎಷ್ಟು ಕೈಗಾರಿಕೆಗಳು ತಲೆ ಎತ್ತಿವೆ ಎನ್ನುವುದನ್ನು ಬಿಜೆಪಿ ಸರ್ಕಾರ ತಿಳಿಸಲಿ ಎಂದು ಸವಾಲು ಹಾಕಿದರು.
ಇದೀಗ ಬೆಂಗಳೂರಿನ ಜಿಐಎಂ ಸಮಾವೇಶದಲ್ಲಿರುವ 160 ಮಳಿಗೆಗಳ ಪೈಕಿ ಕೇವಲ 56 ಮಳಿಗೆಗಳಲ್ಲಿ ವಿವಿಧ ಕಂಪೆನಿಗಳು ಬಂದಿವೆ. ಇವುಗಳಲ್ಲಿ ಕೇವಲ 5 ಕಂಪೆನಿಗಳೊಂದಿಗೆ ಮಾತ್ರ ಒಡಂಬಡಿಕೆ (ಎಂಓಯು) ಆಗಿದೆಯಷ್ಟೆ. ಜಿಂದಾಲ್‍ನಂತಹ ಕಂಪೆನಿ ಮುಂದಿನ 7 ರಿಂದ 8 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಹೇಳಿಕೆಯನ್ನಷ್ಟೆ ನೀಡಿದೆ. ಕೇವಲ 100 ಕೋಟಿ ಬಂಡವಾಳ ಹೂಡಿಕೆಗೆಯಿಂದ 5 ಸಾವಿರ ಉದ್ಯೋಗ ಸೃಷ್ಟಿ ಮೊದಲಾಗಿ ದಾಖಲು ಮಾಡಿಕೊಳ್ಳಲಾಗಿದ್ದು, ಇಂತಹ ಪ್ರಚಾರದ ಸಮಾವೇಶಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ತೀಕ್ಷ್ಣವಾಗಿ ನುಡಿದರು.
ಜಿಐಎಂ ಸಮಾವೇಶದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲು ನಾಟಕ ಆಡುವುದನ್ನು ಬಿಡಲಿ. ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಪ್ರಚಾರಗಳ ನಡುವೆ 2020-21 ನೇ ಸಾಲಿನಲ್ಲಿ 12 ಲಕ್ಷಗಳಷ್ಟು ಇದ್ದ ಸಣ್ಣ ಕೈಗಾರಿಕೆಗಳಲ್ಲಿ ಶೇ.30 ರಷ್ಟು ಅಂದರೆ 3 ಲಕ್ಷ ಸಣ್ಣ ಉದ್ದಿಮೆಗಳು ಶಾಶ್ವತವಾಗಿ ಮುಚ್ಚಿವೆಯೆಂದು ಲಕ್ಷ್ಮಣ್ ವಸ್ತುಸ್ಥಿತಿಯನ್ನು ತೆರೆದಿಟ್ಟರು.
ಪ್ರಸ್ತುತ ಆಯ್ದ ಪತ್ರಕರ್ತರಿಗೆ ಕಾಣಿಕೆಯ ರೂಪದಲ್ಲಿ ಹಣವನ್ನು ನೀಡಿರುವ ಆರೋಪ ಕೇಳಿ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿಗಳು ತನಿಖೆಗೆ ಆದೇಶ ಮಾಡಲಿ ಎಂದು ಸವಾಲೊಡ್ಡಿದರಲ್ಲದೆ, ಈ ಬಗ್ಗೆ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿದರು.

ಕಾಂಗ್ರೆಸ್ ಕೊಡುಗೆ ಕರಪತ್ರ ಬಿಡುಗಡೆ:

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಕೊಡಗಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳ ಕರಪತ್ರವನ್ನು ಇದೇ ಸಂದರ್ಭ ಬಿಡುಗಡೆ ಮಾಡಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಬಾನಂಡ ಪ್ರತ್ಯು ಮತ್ತು ನಾಗಣ್ಣ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!