ಮುಂಬೈ ಗೆದ್ದಾಗ ಆರ್ಸಿಬಿ ಪ್ಲೇಯರ್ಸ್‌ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಪಂದ್ಯದ ಬೆಸ್ಟ್‌ ಟ್ವಿಟ್ಸ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ವಾಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್‌ ಗೆಲುವು ಸಾಧಿಸುವುದರೊಂದಿಗೆ ಆರ್ಸಿಬಿ ಪ್ಲೇ ಆಫ್‌ ಪ್ರವೇಶಿಸಿದೆ.
ಆರ್ಸಿಬಿ ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಮುಂಬೈ ಗೆಲ್ಲಬೇಕಿತ್ತು. ಕ್ರೀಡಾಂಗಣದಲ್ಲಿ ಆರ್ಸಿಬಿ ಅಭಿಮಾನಿಗಳೇ ತುಂಬಿದ್ದರು. ಮುಂಬೈ- ಆರ್ಸಿಬಿ ಜೆರ್ಸಿ ತೊಟ್ಟ ಅಭಿಮಾನಿಗಳ ಉದ್ಘೋಷ ಮುಗಿಲು ಮುಟ್ಟಿತ್ತು. ಮೈದಾನದಲ್ಲಿ ಆರ್ಸಿಬಿ.. ಆರ್ಸಿಬಿ.. ಎಂಬ ಕೂಗುಗಳೇ ಮಾರ್ಧನಿಸುತ್ತಿತ್ತು. ಮುಂಬೈ ಬ್ಯಾಟಿಂಗ್‌ – ಬೌಲಿಂಗ್‌ ವೇಳೆ ಆರ್ಸಿಬಿ ಅಭಿಮಾನಿಗಳು ಎದ್ದುನಿಂತು ಹುರಿದುಂಬಿಸುತ್ತಿದ್ದರು.

ಸತತ ಸೋಲುಗಳಿಂದ ಕಂಗಾಲಾಗಿದ್ದ ಮುಂಬೈ ಈ ಪಂದ್ಯದಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿತ್ತು. ಅರ್ಸಿಬಿ ಅಭಿಮಾನಿಗಳ ನಿರೀಕ್ಷೆಯನ್ನೂ ಉಳಿಸಿಕೊಂಡಿತು.

ಮತ್ತೊಂದೆಡೆ ಆರ್ಸಿಬಿ ಆಟಗಾರರು ಒಟ್ಟಾಗಿ ಕುಳಿತು ದೊಡ್ಡ ಪರದೆಯ ಮೇಲೆ ಪಂದ್ಯ ವೀಕ್ಷಿಸುತ್ತಿದ್ದರು. ಫಾಫ್‌, ಮ್ಯಾಕ್ಸ್‌ ವೆಲ್‌, ಕೊಹ್ಲಿ ಸೇರಿದಂತೆ ಆರ್ಸಿಬಿ ಆಟಗಾರರು ಮುಂಬೈ ಆಟವನ್ನು ಸಂಭ್ರಮಿಸುತ್ತಿದ್ದರು. ಮುಂಬೈ ಗೆಲುವು ಸಾಧಿಸುತ್ತಿದ್ದಂತೆ ಎಲ್ಲಾ ಪ್ಲೇಯರ್ಸ್‌ ಕುಣಿದು ಕುಪ್ಪಳಿಸಿ ಖುಷಿಪಟ್ಟರು. ಆರ್ಸಿಬಿ ಸಾಮಾಜಿಕ ಜಾಲತಾಣವು ಈ ಚಿತ್ರಗಳನ್ನು ಹಂಚಿಕೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಡೆಲ್ಲಿ ತಂಡ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ (3 ವಿಕೆಟ್‌) ಕಂಗೆಟ್ಟು ನಿಗದಿತ ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 159 ರನ್‌ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಇಶಾನ್ ಕಿಶನ್ (48) ಮತ್ತು ಡೆವಾಲ್ಡ್ ಬ್ರೆವಿಸ್ (37) ಗೆಲುವಿನ ಆಸೆ ಚಿಗುರಿಸಿದರು. ಪಂದ್ಯದ ಕೊನೆಯಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ ಕೇವಲ 11 ಎಸೆತಗಳಲ್ಲಿ 34 ಸಿಡಿಸುವುದರೊಂದಿಗೆ ಡೆಲ್ಲಿ ಪ್ಲೇ ಆಫ್‌ ಆಸೆ ಭಗ್ನಗೊಳಿಸಿದರು.

ಮುಂಬೈ ಕೊನೆ ಓವರ್‌ ನಲ್ಲಿ(19.1) ಗೆಲುವಿನ ನಗೆ ಬೀರಿತು. ಮುಂಬೈ ಗೆಲುವಿಗಾಗಿ ಕಾದುಕುಳಿತಿದ್ದ ಆರ್ಸಿಬಿ ಅಭಿಮಾನಿಗಳ ಪ್ರಾರ್ಥನೆ ಫಲಿಸಿತು.

ಈ ಮೂಲಕ ನಾಲ್ಕನೇ ತಂಡವಾಗಿ ಆರ್ಸಿಬಿ ಪ್ಲೇ ಆಫ್‌ ಗೆ ಎಂಟ್ರಿ ಕೊಟ್ಟಿದ್ದು, ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಎಲಿಮನೇಟರ್‌ ಪಂದ್ಯವಾಡಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!