IPL 2023: 10 ಕೋಟಿಯ ಆಲ್ ರೌಂಡರ್, ಸ್ಟಾರ್ ವಿಕೆಟ್ ಕೀಪರ್‌ ಬಿಡುಗಡೆಗೆ ಮುಂದಾದ ಡೆಲ್ಲಿ ಕ್ಯಾಪಿಟಲ್ಸ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ 2023 ರ ಟೂರ್ನಿಗೆ ಆಟಗಾರರನ್ನು ಉಳಿಸಿಕೊಳ್ಳುವ ಗಡುವಿನ ಮುಂಚಿತವಾಗಿ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ತಂಡದಿಂದ ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನೀಡಲು ನವೆಂಬರ್ 15 ರ ಗಡವನ್ನು ನೀಡಲಾಗಿದೆ. ಐಪಿಎಲ್ 2023 ರ ಋತುವಿನ ಹರಾಜು ಡಿಸೆಂಬರ್ 16 ಎರಂದು ನಡೆಯಲಿದೆ.
ಪಿಟಿಐ ಪ್ರಕಾರ, ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್, ಸ್ಟಾರ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ವಿಕೆಟ್ ಕೀಪರ್ ಬ್ಯಾಟರ್‌ಗಳಾದ ಕೆ.ಎಸ್.ಭರತ್ ಮತ್ತು ಟಿಮ್ ಸೀಫರ್ಟ್ ಅವರಂತಹ ಸ್ಟಾರ್ ಆಟಗಾರರನ್ನು ಕೈಬಿಡಲು ಸಿದ್ಧವಾಗಿದೆ. ಮಂದೀಪ್ ಸಿಂಗ್ ಮತ್ತು ಅಶ್ವಿನ್ ಹೆಬ್ಬಾರ್ ಬಿಡುಗಡೆಗೊಳ್ಳಲಿರುವ ಇತರ ನಿರೀಕ್ಷಿತ ಆಟಗಾರರು. “ಶಾರ್ದೂಲ್ ಪ್ರೀಮಿಯಂ ಆಲ್‌ರೌಂಡರ್ ಆದರೆ ಅವರ ಬೆಲೆಯು ಸಮಸ್ಯೆಯಾಗಿದೆ. ಬಿಡುಗಡೆಯಾಗಲಿರುವ ಇತರರೆಂದರೆ ಹೆಬ್ಬಾರ್, ಮಂದೀಪ್, ಸೀಫರ್ಟ್ ಮತ್ತು ಭರತ್” ಎಂದು ಐಪಿಎಲ್ ಮೂಲಗಳು ಪಿಟಿಐ ಉಲ್ಲೇಖಿಸಿವೆ.
ಠಾಕೂರ್ ಅವರನ್ನು ಡೆಲ್ಲಿ ಪ್ರಾಂಚೈಸಿ 10.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ 2022 ರಲ್ಲಿ ಅವರು ಚೆಂಡಿನೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ಬ್ಯಾಟಿಂಗ್‌ ನಲ್ಲಿ ಕೇವಲ 120 ರನ್ ಗಳಿಸಿದ್ದ  ಅವರು 15 ವಿಕೆಟ್‌ ಗಳನ್ನು ಪಡೆದಿದ್ದರು. ಆದರೆ ಪ್ರತಿ ಓವರ್‌ಗೆ ಸುಮಾರು 10 ರ ಸರಾಸರಿಯಲ್ಲಿ ರನ್ ನೀಡಿದರು. ನಾಯಕ ರಿಷಬ್ ಪಂತ್ ಫಿಟ್‌ ಇದ್ದ ಕಾರಣ ಇತರೆ ವಿಕೆಟ್ ಕೀಪರ್ ಗಳಾದ ಸೀಫರ್ಟ್ ಮತ್ತು ಭರತ್ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಸೀಫರ್ಟ್ ಮತ್ತು ಭಾರತ್ ಕೇವಲ ಒಂದೆರಡು ಪಂದ್ಯಗಳನ್ನು ಆಡಿ ಪಂದ್ಯಾವಳಿಯ ಎಲ್ಲಾ ಪಂದ್ಯಗಳಲ್ಲಿ ಬೆಂಚು ಕಾಯಿಸಿದರು. ಪಂಜಾಬ್ ಬ್ಯಾಟರ್ ಮನ್ ದೀಪ್ ಅವರಿಗೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಅವರು ಕೇವಲ ಮೂರು ಪಂದ್ಯಗಳಲ್ಲಿ ಕಾಣಿಸಿಕೊಂಡು ಕೇವಲ 18 ರನ್ ಗಳಿಸಿದರು. ಬ್ಯಾಟರ್ ಹೆಬ್ಬಾರ್ ಒಂದೂ ಪಂದ್ಯವನ್ನಾಡಿರಲಿಲ್ಲ.
ವರದಿಗಳ ಪ್ರಕಾರ, ತಂಡಗಳು ಈ ಬಾರಿ ಪಟ್ಟಿಯಲ್ಲಿ 15 ಆಟಗಾರರನ್ನು ಉಳಿಸಿಕೊಳ್ಳಬಹುದು, ಅಂದರೆ ಉಳಿದ 10 ಆಟಗಾರರನ್ನು ಹೊರಗಿಡಬೇಕಾಗುತ್ತದೆ. 2023 ರ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ 95 ಕೋಟಿ ಆಗಿರುತ್ತದೆ. ಡಿಸೆಂಬರ್‌ನಲ್ಲಿ ಹರಾಜು ನಡೆಯುವ ಸಾಧ್ಯತೆ ಇದ್ದು, ಈ ಬಾರಿ ವಿದೇಶದಲ್ಲಿ ಹರಾಜು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಐಪಿಎಲ್ 2023 ಹರಾಜಿಗಾಗಿ ಐದು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಇಸ್ತಾಂಬುಲ್, ಬೆಂಗಳೂರು, ನವದೆಹಲಿ, ಮುಂಬೈ ಮತ್ತು ಹೈದರಾಬಾದ್ ಪಟ್ಟಿಯ ಭಾಗವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!