ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಆಟಗಾರರ ಸುತ್ತ ಕಾಣಿಸಿಕೊಳ್ಳುತ್ತಿರುವ ಗರ್ಲ್‌ಫ್ರೆಂಡ್ ಸಂಸ್ಕೃತಿಯನ್ನು ನಿಯಂತ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ತರಲು ನಿರ್ಧರಿಸಿದೆ.
ಆಟಗಾರರ ಜೊತೆಗಿರುವ ಗೆಳತಿಯರಲ್ಲಿ ಕೆಲವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದು, ಇವರಿಂದ ತಂಡದ ಒಳಗಿನ ರಹಸ್ಯ ಮಾಹಿತಿ ಸಾರ್ವಜನಿಕವಾಗಿ ಸೋರಿಕೆಯಾಗಬಹುದು ಎಂಬ ಭಯ ಬಿಸಿಸಿಐಗೆ ಕಾಡುತ್ತಿದೆ. ಅದರಲ್ಲಿ ಕೆಲವರು ಈ ಹಿಂದೆ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ್ದರು. ಇದು ಕ್ರಿಕೆಟ್‌ನ ಘನತೆಗೆ ಧಕ್ಕೆ ತರಬಹುದು ಎಂಬ ಆತಂಕ ಕೂಡ ಇದೀಗ ವ್ಯಕ್ತವಾಗಿದೆ. ಕೆಲದಿನಗಳ ಹಿಂದೆ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಡಗೌಟ್‌ನಲ್ಲಿ ಮೊಬೈಲ್ ಬಳಸಿರುವುದು ಮತ್ತು ಕ್ಯಾಪ್ಟನ್ ರಿಯಾನ್ ಪರಾಗ್ ವೇಪಿಂಗ್ ಮಾಡುತ್ತಾ ಸಿಕ್ಕಿಬಿದ್ದಿರುವುದು ಬಿಸಿಸಿಐ ಅನ್ನು ಇನ್ನಷ್ಟು ಕೆರಳಿಸಿದೆ. ಹಾಗಾಗಿ ಇದನ್ನು ಈಗಲೇ ನಿಲ್ಲಿಸದಿದ್ದರೆ, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.
ಸದ್ಯದ ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಇಶಾನ್ ಕಿಶನ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ತಮ್ಮ ಗೆಳತಿಯರೊಂದಿಗೆ ಕಾಣಿಸಿಕೊಂಡಿರುವುದನ್ನು ಬಿಸಿಸಿಐ ಗಮನಿಸಿದೆ. ಆಟಗಾರರು ಡೇಟಿಂಗ್ ಮಾಡುವುದಕ್ಕೆ ಮಂಡಳಿಯ ಅಭ್ಯಂತರವಿಲ್ಲದಿದ್ದರೂ, ಗೆಳತಿಯರು ತಂಡದ ಜೊತೆಯಲ್ಲಿಯೇ ಪ್ರಯಾಣಿಸುವುದು ಮತ್ತು ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದರ ಬಗ್ಗೆ ಅಧಿಕಾರಿಗಳು ಇದೀಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐನ ಹೋಸ ನಿಯಮದ ಪ್ರಕಾರ, ಪತ್ನಿಯರು ಮತ್ತು ಕುಟುಂಬ ಸದಸ್ಯರು ತಂಡದ ಜೊತೆ ಪ್ರಯಾಣಿಸಲು ಅವಕಾಶವಿರುತ್ತದೆ. ಆದರೆ, ಗೆಳತಿಯರ ವಿಷಯದಲ್ಲಿ ಬಿಸಿಸಿಐ ಈಗಿನ ‘ಗರ್ಲ್‌ಫ್ರೆಂಡ್ ಸಂಸ್ಕೃತಿ’ಗೆ ಸಂಪೂರ್ಣವಾಗಿ ನಿಷೇಧ ಹೇರಬಹುದು ಅಥವಾ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಬಹುದು. ಈ ನಿಯಮವು ಮುಂದಿನ ಐಪಿಎಲ್ ಆವೃತ್ತಿಯಿಂದ ಜಾರಿಗೆ ಬರುವ ಸಾಧ್ಯತೆಯಿದೆ.



