May 13, 2026
Wednesday, May 13, 2026
spot_img

IPL | ಅಶಿಸ್ತಿನ ಆಟಗಾರರಿಗೆ ಬಿಸಿಸಿಐ ಶಾಕ್: ಮಾಲೀಕರಿಗೂ ಡಗೌಟ್ ಎಂಟ್ರಿ ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆವೃತ್ತಿಯಲ್ಲಿ ಕಂಡುಬಂದ ಸರಣಿ ಶಿಸ್ತು ಉಲ್ಲಂಘನೆಗಳಿಂದ ಎಚ್ಚೆತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಈಗ ಕಠಿಣ ‘ಡಿಸಿಪ್ಲಿನ್ ಕೋಡ್’ ಜಾರಿಗೆ ತಂದಿದೆ. ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರ ನಡವಳಿಕೆ ಹದಗೆಡುತ್ತಿರುವುದು ಹಾಗೂ ಭದ್ರತಾ ಲೋಪಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಈ ಬಾರಿಯ ಟೂರ್ನಿಯಲ್ಲಿ ಆಟಗಾರರು ಮತ್ತು ಫ್ರಾಂಚೈಸಿಗಳ ನಡೆ ಮಂಡಳಿಗೆ ಮುಜುಗುರ ತಂದಿದೆ. ಮುಖ್ಯವಾಗಿ ಈ ಕೆಳಗಿನ ಕಾರಣಗಳಿಂದ ಹೊಸ ಮಾರ್ಗಸೂಚಿ ಅನಿವಾರ್ಯವಾಗಿದೆ:

ಆಟಗಾರರ ಹೋಟೆಲ್ ರೂಮ್ ಮತ್ತು ಬಸ್‌ಗಳಂತಹ ಸುರಕ್ಷಿತ ವಲಯಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ.

ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಸುಲಭವಾಗಿ ಆಟಗಾರರನ್ನು ಸಂಪರ್ಕಿಸುತ್ತಿರುವುದು ಭ್ರಷ್ಟಾಚಾರ ನಿರೋಧಕ ದಳಕ್ಕೆ ಆತಂಕ ತಂದಿದೆ.

ಖಾಸಗಿ ವಿಡಿಯೋಗಳು ಮತ್ತು ಡ್ರೆಸ್ಸಿಂಗ್ ರೂಮ್ ದೃಶ್ಯಗಳನ್ನು ಸೋಶಿಯಲ್ ಮೀಡಿಯಾ ಕ್ರಿಯೇಟರ್‌ಗಳಿಗೆ ಬಿಟ್ಟುಕೊಡುತ್ತಿರುವುದು.

ರಾಜಸ್ಥಾನ್ ರಾಯಲ್ಸ್ ಆಟಗಾರ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡಿ ಸಿಕ್ಕಿಬಿದ್ದಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಬಿಸಿಸಿಐನ ಹೊಸ ರೂಲ್ಸ್ ಹೀಗಿವೆ:

ಟೀಮ್ ಮ್ಯಾನೇಜರ್ ಅನುಮತಿಯಿಲ್ಲದೆ ಆಟಗಾರರ ಹೋಟೆಲ್ ಕೊಠಡಿಗೆ ಯಾರಿಗೂ ಪ್ರವೇಶವಿಲ್ಲ.

ಸ್ನೇಹಿತರು ಅಥವಾ ಸಂಬಂಧಿಕರನ್ನು ಹೋಟೆಲ್‌ನ ಲಾಬಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಭೇಟಿಯಾಗಲು ಅವಕಾಶ.

ಪಂದ್ಯ ನಡೆಯುವಾಗ ಫ್ರಾಂಚೈಸಿ ಮಾಲೀಕರು ಡಗೌಟ್‌ ಅಥವಾ ಡ್ರೆಸ್ಸಿಂಗ್ ರೂಮ್‌ಗೆ ಬರುವಂತಿಲ್ಲ.

ಡಗೌಟ್‌ಗಳಲ್ಲಿ ಮೊಬೈಲ್ ಬಳಕೆ ಮತ್ತು ತರಬೇತಿ ವೇಳೆ ಕಂಟೆಂಟ್ ಕ್ರಿಯೇಟರ್‌ಗಳಿಂದ ವಿಡಿಯೋ ಶೂಟಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಿಯಮ ಮೀರಿದರೆ ಭಾರಿ ಮೊತ್ತದ ದಂಡದ ಜೊತೆಗೆ, ಪಂದ್ಯಾವಳಿಯಿಂದ ಅಮಾನತು ಮಾಡುವ ಎಚ್ಚರಿಕೆಯನ್ನು ಕಾರ್ಯದರ್ಶಿ ದೇವಜಿತ್ ಸೈಕಿಯಾ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !