ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025ರಲ್ಲಿ ಎಲ್ಲಾ ತಂಡಗಳಿಗಿಂತ ಆರ್‌ಸಿಬಿ ತಂಡವು ಸತತ ಗೆಲುವುಗಳೊಂದಿಗೆ ಅಬ್ಬರಿಸುತ್ತಿದೆ. 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಅಂಕಪಟ್ಟಿಯ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ, ಪ್ಲೇಆಫ್ ಸ್ಥಾನವನ್ನು ಶೇ. 90ರಷ್ಟು ಭದ್ರಪಡಿಸಿಕೊಂಡಿದೆ.
RCB ಅಬ್ಬರದ ಆಟವನ್ನು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ. ಜೊತೆಗೆ 18 ವರ್ಷಗಳಿಂದ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿರುವ ಆರ್‌ಸಿಬಿ ಈ ಬಾರಿ ತನ್ನ ಕನಸನ್ನು ನನಸಾಗಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಆರ್‌ಸಿಬಿ ಎಲ್ಲಾ ವಿಭಾಗಗಳಲ್ಲಿ ಅದ್ಭುತವಾಗಿ ಆಡುತ್ತಿದೆ. ವಿರಾಟ್ ಕೊಹ್ಲಿಯ 443 ರನ್‌ಗಳ (5 ಅರ್ಧಶತಕ) ನೇತೃತ್ವದ ಬ್ಯಾಟಿಂಗ್ ಮತ್ತು ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ರಂತಹ ಬೌಲರ್‌ಗಳ ಕೊಡುಗೆ ತಂಡವನ್ನು ಬಲಿಷ್ಠಗೊಳಿಸಿದೆ. ಜೊತೆಗೆ ಮುಂಬೈ ಇಂಡಿಯನ್ಸ್‌ನಿಂದ ಆರ್‌ಸಿಬಿಗೆ ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.