ಚಾಬಹಾರ್‌ ಬಂದರಿನ ಅಭಿವೃದ್ಧಿಗೆ ಭಾರತದೊಂದಿಗೆ ಸಂಪೂರ್ಣ ಬದ್ಧವೆಂದ ಇರಾನ್ : ʼಡ್ರಾಗನ್‌ ಚೀನಾʼಗೆ ಹಿನ್ನಡೆಯುಂಟು ಮಾಡೀತೇ ಭಾರತ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಧ್ಯ ಏಷ್ಯಾ ಸೇರಿದಂತೆ ಇತರ ಪ್ರಮುಖ ಪ್ರದೇಶಗಳ ಸಾಗಣೆ ಕೇಂದ್ರವಾಗಿ ಚಾಬಹಾರ್‌ ಬಂದರನ್ನು ಅಭಿವೃದ್ಧಿಗೊಳಿಸಲು ಭಾರತ ಮತ್ತು ಇರಾನ್‌ ದೇಶಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ಈ ಬಂದರಿನ ಕಾರ್ಯಾಚರಣೆ ಅಂಶಗಳನ್ನು ಚರ್ಚಿಸಲು ಎರಡೂ ದೇಶದ ಪ್ರತಿನಿಧಿಗಳು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ.

ಚೀನಾದ ಒನ್‌ ಬೆಲ್ಟ್‌ ಒನ್‌ ರೋಡ್‌ (ಸಿಲ್ಕ್‌ ರೋಡ್)‌ ಅಥವಾ ಬೆಲ್ಟ್‌ ಅಂಡ್‌ ರೋಡ್‌ ಇನಿಶಿಯೇಟಿವ್ ಎಂದು ಕರೆಯಲ್ಪಡುವ ಹುನ್ನಾರಕ್ಕೆ ಹಿನ್ನಡೆಯುಂಟು ಮಾಡಲು ಭಾರತವು ಇರಾನ್‌ ನ ಚಾಬಹಾರ್‌ ಬಂದರಿನ ದಾಳವನ್ನು ಪ್ರಯೋಗಿಸಿತ್ತು. ಆ ಮೂಲಕ ಅಪಘಾನಿಸ್ತಾನವನ್ನು ಸಮುದ್ರಮಾರ್ಗಕ್ಕೆ ಸಂಪರ್ಕಿಸುವ ಮೂಲಕ ಚಾಬಹಾರ್‌ ಬಂದರನ್ನು ಮಧ್ಯ ಏಷ್ಯಾ ರಾಷ್ಟ್ರಗಳ ವಾಣಿಜ್ಯ ಸಾರಿಗೆ ಕೇಂದ್ರವನ್ನಾಗಿಸಲು ಚಿಂತಿಸಲಾಗಿತ್ತು.

ಪ್ರಸ್ತುತ ಭಾರತಕ್ಕೆ ಆಗಮಿಸಿರುವ ಇರಾನ್‌ ನ ನೂತನ ವಿದೇಶಾಂಗ ಸಚಿವ ಅಬ್ಡೊಲ್ಲಾಹಿಯಾನ್‌ ಚಾಬಹಾರ್‌ ಬಂದರನ್ನು ಅಭಿವೃದ್ಧಿಪಡಿಸಲು ಪರಸ್ಪರ ಸಹಕಾರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ್ದು ಭಾರತದ ಸಹಕಾರದೊಂದಿಗೆ ಬಂದರಿನ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಭಾರತದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಜಂಟಿ ಸಮಗ್ರ ಯೋಜನೆ (ಜೆಸಿಪಿಒಎ) ಗೆ ಸಂಬಂಧಿಸಿದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಇರಾನ್‌ ಮತ್ತು ಭಾರತದ ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಉಲ್ಲೇಖಿಸಿದ ವಿದೇಶಾಂಗ ಸಚಿವ ಜೈಶಂಕರ್‌ ಅವರು ಪ್ರಸ್ತುತ ಚಾಬಹಾರ್‌ ಬಂದರಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಪ್ರಮುಖವಾಗಿ ಚಾಬಹಾರ್‌ ಬಂದರು ವಾಣಿಜ್ಯ ಸಾರಿಗೆ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!