ಹಿಜಾಬ್ ಪ್ರತಿಭಟನೆ: ದಶಕಗಳ ಹಿಂದಿನ ಕಡ್ಡಾಯ ಹಿಜಾಬ್ ಕಾನೂನು ಪರಿಶೀಲಿಸುತ್ತಿರುವ ಇರಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್ ನಲ್ಲಿ ಹಿಜಾಬ್ ವಿರುದ್ಧ ಚಳವಳಿ ನಡೆಯುತ್ತಿರುವುದು ಗೊತ್ತೇ ಇದೆ. ಕಳೆದ ಸೆಪ್ಟಂಬರ್ ನಲ್ಲಿ ಮಹ್ಸಾ ಅಮಿನಿ ಎಂಬ ಯುವತಿಯನ್ನು ಹಿಜಾಬ್ ಧರಿಸದ ಕಾರಣಕ್ಕೆ ಇರಾನ್ ಪೊಲೀಸರು ಬಂಧಿಸಿ ಹಿಗಾಮುಗ್ಗ ಹಲ್ಲೆ ನಡೆಸಿ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದು,   ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಆಗಿನಿಂದ ಹಿಜಾಬ್ ನಿಯಮದ ವಿರುದ್ಧ ಚಳುವಳಿ ಪ್ರಾರಂಭವಾಯಿತು. ಸರ್ಕಾರ ಕೂಡಲೇ ಈ ನಿಬಂಧನೆಯನ್ನು ತೆಗೆದುಹಾಕಬೇಕು ಎಂದು ಮಹಿಳೆಯರು ಮತ್ತು ಕೆಲವು ಪುರುಷರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗಳು ಇರಾನ್‌ನ ಹಲವು ಭಾಗಗಳಲ್ಲಿ ಹಿಂಸಾಚಾರಕ್ಕೆ ತಿರುಗಿದವು. ಪರಿಣಾಮವಾಗಿ, ಸರ್ಕಾರವು ಪೊಲೀಸ್ ಮತ್ತು ಮಿಲಿಟರಿ ಪಡೆಗಳನ್ನು ಬಳಸಿತು. ಗುಂಡಿನ ದಾಳಿಯಲ್ಲಿ ನೂರಾರು ಜನರು ಪ್ರಾಣತೆತ್ತರು, ಸಾವಿರಾರು ಜನರನ್ನು ಬಂಧಿಸಲಾಯಿತು. ಸರ್ಕಾರ ಚಳವಳಿ ಹತ್ತಿಕ್ಕಲು ಎಷ್ಟೇ ಕ್ರಮ ಕೈಗೊಂಡರೂ ಜನ ಹಿಂದೆ ಸರಿಯುತ್ತಿಲ್ಲ. ಇದಲ್ಲದೆ, ಈ ಆಂದೋಲನವು ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ  ಹಿಜಾಬ್ ಕಾನೂನನ್ನು ಪರಿಶೀಲನೆ ನಡೆಸಕು ಮುಂದಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ದಶಕಗಳಿಂದ ಇರಾನ್‌ನಲ್ಲಿ ಹಿಜಾಬ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ಕಾನೂನಿನಲ್ಲಿ ಬದಲಾವಣೆ ಮಾಡುವ ವಿಚಾರವನ್ನು ಈಗ ಪರಿಗಣಿಸಲಾಗುತ್ತಿದೆ ಎಂದು ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಹೇಳಿದ್ದಾರೆ. ಇದಕ್ಕಾಗಿ ಈಗಾಗಲೇ ಸಂಸತ್ತು ಮತ್ತು ನ್ಯಾಯಾಂಗ ವ್ಯವಸ್ಥೆ ಕೆಲಸ ಮಾಡುತ್ತಿದೆ. ಆದರೆ, ಹಿಜಾಬ್ ಸಂಪೂರ್ಣವಾಗಿ ರದ್ದಾಗುತ್ತದೆಯೇ? ಅಥವಾ ಇನ್ಯಾವುದೇ ಬದಲಾವಣೆಗಳಾಗಲಿವೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಈಗಾಗಲೇ ಅಲ್ಲಿನ ರಸ್ತೆಗಳಲ್ಲಿ ಹಿಜಾಬ್ ಸುಟ್ಟು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!