ಇಷ್ಟು ಬೇಗ ಸಾಕಾಯ್ತಾ ಮಳೆ? ರಾಜ್ಯದ ಹಲವು ಭಾಗಗಳಲ್ಲಿ ವರುಣನ ಅಬ್ಬರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಸಿಲಿಗೆ ಹೈರಾಣಾಗಿದ್ದ ಜನತೆಗೆ ಅಂತೂ ಮಳೆಯ ದರುಶನ ಆಗಿದೆ. ಆದರೆ ಕೆಲ ಭಾಗಗಳಲ್ಲಿ ಮಾತ್ರ ಮಳೆಯಿಂದ ಜನ ಸುಸ್ತಾಗಿದ್ದಾರೆ. ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಹರ್ಷ ಮೂಡಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಜೋರು ಮಳೆಯಾಗಿದ್ದು, ಹಲವು ಅವಾಂತರಗಳು ಸೃಷ್ಟಿಯಾಗಿವೆ.

ಬೆಂಗಳೂರಿನ ಬಸವನಗುಡಿ, ಕಾರ್ಪೊರೇಷನ್, ಟೌನ್‌ಹಾಲ್, ಮೆಜೆಸ್ಟಿಕ್, ಗೊರಗುಂಟೆ ಪಾಳ್ಯ, ಜಾಲಹಳ್ಳಿ, ಸುಮ್ಮನಹಳ್ಳಿ, ಯಶವಂತಪುರ, ಮಹಾಲಕ್ಷ್ಮಿಲೇಔಟ್‌, ವಿಜಯನಗರ, ನಾಗರಬಾವಿ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಸಂಜೆ ವೇಳೆಗೆ ಧಾರಾಕಾರವಾಗಿ ಮಳೆ ಸುರಿಯಿತು. ಮಳೆಗೆ ರಸ್ತೆಗಳು ಜಲಾವೃತವಾಗಿತ್ತು. ಒಕಳೀಪುರಂ ಅಂಡರ್‌ಪಾಸ್‌ನಲ್ಲಿ 2 ಅಡಿಯಷ್ಟು ನೀರು ನಿಂತು ಸವಾರರು ಪರದಾಡಿದರು. ಕಂಟೋನ್ಮೆಂಟ್ ರೈಲ್ವೆ ಅಂಡರ್ ಪಾಸ್‌ನಲ್ಲೂ ನೀರು ನಿಂತುಕೊಂಡಿತ್ತು. ಇನ್ನು ಮೈಸೂರು ರಸ್ತೆಯಲ್ಲಿ ನದಿಯಂತಾಗಿದ್ದ ರಸ್ತೆಯಲ್ಲಿ ವಾಹನ ಸವಾರರು ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏರ್‌ಪೋರ್ಟ್ ರಸ್ತೆ ಮಾರ್ಗದಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು

ನೆಲಮಂಗಲ ಸುತ್ತಮುತ್ತ ಭಾರಿ ಮಳೆ ಆಗಿದೆ. ಅರಿಶಿನಕುಂಟೆ, ಮಾಕಳಿ, ಮಾದನಾಯಕನಹಳ್ಳಿ ಬಳಿ ಸಂಚಾರ ದಟ್ಟಣೆ ಆಗಿತ್ತು. ನೆಲಮಂಗಲ ನಗರದ ಭೈರವೇಶ್ವರ ಬಡಾವಣೆಯಲ್ಲಿ, ರಾಜಕಾಲುವೆ ತುಂಬಿ ಮನೆಗಳಿಗೆ ಮಳೆ ನುಗ್ಗಿತ್ತು.

ರಾಯಚೂರಿನ ಮಾನ್ವಿಯಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದವು. ಜೋರು ಗಾಳಿಗೆ ಪಟ್ಟಣದ ಹಲವೆಡೆ ಜಾಹೀರಾತು ಫಲಕಗಳು ಮುರಿದು ಬಿದ್ದವು. ಇನ್ನು ಬಿರುಗಾಳಿ ಸಮೇತ ಸುರಿದ ಮಳೆ ಪರಿಣಾಮ ಬಳ್ಳಾರಿಯ ಕಂಪ್ಲಿಯಲ್ಲಿ ಹತ್ತಾರು ಎಕರೆಯ ಬಾಳೆ ಸಂಪೂರ್ಣ ನೆಲಕಚ್ಚಿದೆ. ಸಂಡೂರು, ಸಿರಗುಪ್ಪ, ಹಗರಿಬೊಮ್ಮನಳ್ಳಿ, ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕುಡ್ಲಿಗಿ ಭಾಗದಲ್ಲಿ ಮಳೆ ಸಿಂಚನವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೃಹತ್ ಮರಗಳು ಧರೆಗುರುಳಿದೆ. ಇನ್ನು ಹಾಸನ ಜಿಲ್ಲೆಯಲ್ಲಿ ಮಳೆಗೆ ಟೆಂಟ್‌ಗಳು ಹಾರಿ ಹೋಗಿವೆ.

ಇನ್ನು ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಅವಾಂತರಗಳು ಸೃಷ್ಟಿಯಾಗಿದ್ದು, ಇನ್ನಷ್ಟು ಮಾಹಿತಿ ಲಭಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!