ಸಾಂಪ್ರದಾಯಿಕ ಸೌಂದರ್ಯ ವರ್ಧಕಗಳಲ್ಲಿ ಅಕ್ಕಿ ತೊಳೆದ ನೀರಿಗೆ ಪ್ರಮುಖ ಸ್ಥಾನವಿದೆ. ಇದು ತ್ವಚೆಯನ್ನು ಮೃದುಗೊಳಿಸಲು, ಕಾಂತಿಯನ್ನು ಹೆಚ್ಚಿಸಲು ಮತ್ತು ನೈಸರ್ಗಿಕ ಹೊಳಪನ್ನು ನೀಡಲು ಸಹಕಾರಿ ಎಂದು ಹೇಳಲಾಗುತ್ತದೆ. ಮನೆಯಲ್ಲೇ ತಯಾರಿಸುವ ಸೌಂದರ್ಯ ವರ್ಧಕಗಳಿಂದ ಹಿಡಿದು ಇತ್ತೀಚಿನ ಜನಪ್ರಿಯ ಕೊರಿಯನ್ ಸ್ಕಿನ್‌ಕೇರ್ ಟ್ರೆಂಡ್‌ಗಳವರೆಗೆ, ಅನೇಕರು ಅಕ್ಕಿ ನೀರನ್ನು ಮುಖಕ್ಕೆ ಬಳಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಲಾಭ ಪಡೆಯಲು ಕೆಲವರು ಇದನ್ನು ರಾತ್ರಿಯಿಡೀ ಮುಖದ ಮೇಲೆ ಹಾಗೆಯೇ ಬಿಡುತ್ತಾರೆ. ಇದು ಸರಳ ಮತ್ತು ಅಗ್ಗದ ಉಪಾಯವಾಗಿ ಕಂಡರೂ, ಬಳಸುವ ವಿಧಾನ ಬಹಳ ಮುಖ್ಯವಾಗಿರುತ್ತದೆ.
ಯಾವುದೇ ವಸ್ತುವನ್ನು ದೀರ್ಘಕಾಲದವರೆಗೆ, ಅದರಲ್ಲೂ ವಿಶೇಷವಾಗಿ ರಾತ್ರಿಯಿಡೀ ತ್ವಚೆಯ ಮೇಲೆ ಬಿಡುವುದರಿಂದ ಕೆಲವು ಅಡ್ಡಪರಿಣಾಮಗಳಾಗಬಹುದು. ಅಕ್ಕಿ ನೀರನ್ನು ತಯಾರಿಸಿದ ವಿಧಾನ ತ್ವಚೆಗೆ ಹಿತ ನೀಡುತ್ತದೆಯೇ ಅಥವಾ ಕಿರಿಕಿರಿ ಉಂಟುಮಾಡುತ್ತದೆಯೇ ಎಂಬುದನ್ನು ಮೊದಲು ತಿಳಿಯಬೇಕಾಗುತ್ತದೆ.
ಅಕ್ಕಿ ನೀರನ್ನು ರಾತ್ರಿಯಿಡೀ ಮುಖದ ಮೇಲೆ ಬಿಟ್ಟರೆ ಏನಾಗುತ್ತದೆ?
ಅಕ್ಕಿ ನೀರಿನಲ್ಲಿ ಪಿಷ್ಟ,ಅಮೈನೋ ಆಮ್ಲಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ, ಇವು ತ್ವಚೆಗೆ ಮೃದುತ್ವ ಮತ್ತು ಬಿಗಿತವನ್ನು ನೀಡುತ್ತವೆ. ಆದರೆ, ಇದನ್ನು ರಾತ್ರಿಯಿಡೀ ಹಾಗೆಯೇ ಬಿಡುವುದರಿಂದ ತ್ವಚೆಯ ರಂಧ್ರಗಳು ಮುಚ್ಚಿಹೋಗಿ, ಚರ್ಮದ ಸ್ವಾಭಾವಿಕ ಸಮತೋಲನಕ್ಕೆ ಅಡ್ಡಿಯಾಗಬಹುದು.
ಹಾಗೂ ಅಕ್ಕಿ ನೀರು ದೀರ್ಘಕಾಲದವರೆಗೆ ಇದು ಮುಖದ ಮೇಲಿರುವುದರಿಂದ ಬೆವರು, ಎಣ್ಣೆ ಅಂಶ ಮತ್ತು ಪರಿಸರದ ಕಲುಷಿತ ಅಂಶಗಳು ಚರ್ಮದ ರಂಧ್ರಗಳಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಮೊಡವೆಗಳು ಅಥವಾ ಚರ್ಮದ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಅಕ್ಕಿ ನೀರು ಸ್ವಚ್ಚವಾಗಿರದಿದ್ದರೆ ತ್ವಚೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಮೊಡವೆ ಅಥವಾ ಸೂಕ್ಷ್ಮ ತ್ವಚೆ ಹೊಂದಿರುವವರಲ್ಲಿ ಇದು ನಕಾರಾತ್ಮಕ ಪ್ರತಿಕ್ರಿಯೆ ನೀಡುವ ಸಾಧ್ಯತೆ ಹೆಚ್ಚು. ಅಕ್ಕಿ ನೀರಿನಲ್ಲಿರುವ ಪಿಷ್ಟದ ಪದರವು ಚರ್ಮದ ರಂಧ್ರಗಳನ್ನು ಮುಚ್ಚಿಹಾಕಬಹುದು, ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕವಾಗಿ ಮೊಡವೆಗಳನ್ನು ಮತ್ತಷ್ಟು ಹೆಚ್ಚಿಸಬಹುದು.
ಸೂಕ್ಷ್ಮ ತ್ವಚೆಯವರಲ್ಲಿ ದೀರ್ಘಕಾಲದ ಬಳಕೆಯು ಚರ್ಮದ ರಕ್ಷಣಾ ಪದರಕ್ಕೆ ಧಕ್ಕೆ ತಂದು ಕೆಂಪಾಗುವಿಕೆ, ತುರಿಕೆ ಅಥವಾ ಉರಿಯೂತಕ್ಕೆ ಕಾರಣವಾಗಬಹುದು. ರೋಸಾಸಿಯಾ ಅಥವಾ ಸಕ್ರಿಯ ಮೊಡವೆಗಳ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ನೈಸರ್ಗಿಕ ಪದಾರ್ಥಗಳಾದರೂ ಸಹ ಅವುಗಳನ್ನು ದೀರ್ಘಕಾಲ ಮುಖದ ಮೇಲೆ ಬಿಟ್ಟರೆ ಸಮಸ್ಯೆ ಉಲ್ಬಣಿಸಬಹುದು.
ತ್ವಚೆಯ ಆರೈಕೆಯಲ್ಲಿ ಅಕ್ಕಿ ನೀರನ್ನು ಬಳಸಲು ಸುರಕ್ಷಿತ ವಿಧಾನ ಯಾವುದು?
ಅಕ್ಕಿ ನೀರನ್ನು ರಾತ್ರಿಯಿಡೀ ಮುಖದ ಮೇಲೆ ಬಿಡುವ ಬದಲು, ‘ಶಾರ್ಟ್ ಕಾಂಟ್ಯಾಕ್ಟ್ ಟ್ರೀಟ್ಮೆಂಟ್’ ಆಗಿ ಬಳಸುವುದು ಉತ್ತಮ. ಇದನ್ನು ಟೋನರ್ ಅಥವಾ ಫೇಸ್ ವಾಶ್ ಆಗಿ ಬಳಸಬಹುದು. ಮುಖಕ್ಕೆ ಹಚ್ಚಿದ 10 ರಿಂದ 15 ನಿಮಿಷಗಳ ನಂತರ ಶುದ್ಧವಾದ ನೀರಿನಿಂದ ತೊಳೆದುಕೊಳ್ಳುವುದು ಅತ್ಯಂತ ಸುರಕ್ಷಿತ ವಿಧಾನವಾಗಿದೆ.



