May 19, 2026
Tuesday, May 19, 2026
spot_img

45 ಕೋಟಿ ರೂ. ಇಡೀ ರಾಜ್ಯಕ್ಕೆ ಸಾಕೇ? ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಶಾಸಕ ಬಿ.ಆರ್.ಪಾಟೀಲ್

ಹೊಸದಿಗಂತ ಕಲಬುರಗಿ:

ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನ ತಾಪದ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಕೂಡ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿಯ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ತಮ್ಮದೇ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಳಂದ ಮತಕ್ಷೇತ್ರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಹಣದ ಕೊರತೆ ಇರುವುದರಿಂದ ತುರ್ತು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಪಿಡಿಓಗಳು ಜನರಿಗೆ ಲಭ್ಯವಾಗುತ್ತಿಲ್ಲ ಮತ್ತು ಆಡಳಿತ ಯಂತ್ರದ ನಿರ್ಲಕ್ಷ್ಯವೇ ಈ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ,” ಎಂದು ಕಿಡಿಹಾಕಿದರು.

ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆಗಾಗಿ ಇತ್ತೀಚೆಗೆ 45 ಕೋಟಿ ರೂ. ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿದ ಅವರು, ಈ ಮೊತ್ತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಇಡೀ ರಾಜ್ಯದ ನೀರಿನ ಸಮಸ್ಯೆಗೆ 45 ಕೋಟಿ ರೂಪಾಯಿ ಹೇಗೆ ತಾನೇ ಸಾಕಾಗುತ್ತದೆ? ನನ್ನ ಒಂದೇ ಕ್ಷೇತ್ರಕ್ಕೆ ಕನಿಷ್ಠ 4 ಕೋಟಿ ರೂಪಾಯಿಗೂ ಹೆಚ್ಚು ಅನುದಾನದ ಅಗತ್ಯವಿದೆ,” ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕರು ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದ್ದಾರೆ.

ನಾರಾಯಣಪುರ ಡ್ಯಾಂನಿಂದ ಭೀಮಾ ನದಿಗೆ 2 ಟಿಎಂಸಿ ನೀರು: ಕೂಡಲೇ ನಾರಾಯಣಪುರ ಅಣೆಕಟ್ಟಿನಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಬೇಕು. ಈ ಕಾಲುವೆಯ ಮೂಲಕ ನೀರು ಹರಿಸುವಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ.

ಈ ಕ್ರಮ ಕೈಗೊಂಡರೆ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ನಾಲ್ಕು ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣದ ಪರಿಹಾರ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮಾಹಿತಿ ನೀಡಲಾಗಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಪಾಟೀಲ್ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !