2,500 ವರ್ಷಗಳ ಪಾಣಿನಿ ಸಮಸ್ಯೆ ಬಗೆಹರಿಸಿರೋದು ಬರೀ ಉತ್ಪ್ರೇಕ್ಷೆಯಾ? ವಿದ್ವತ್ ವಲಯದಲ್ಲಿದೆ ಈ ಅಭಿಪ್ರಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೆಲವು ದಿನಗಳ ಹಿಂದಷ್ಟೇ, 2,500 ವರ್ಷಗಳಷ್ಟು ಹಳೆಯ ಸಂಸ್ಕೃತ ಭಾಷಾ ಸಮಸ್ಯೆಗೆ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಪರಿಹಾರ ಕಂಡು ಹಿಡಿದ್ದಾರೆ ಎಂಬ ಸುದ್ದಿಗಳು ಮಾಧ್ಯಗಳಲ್ಲಿ ಬಿತ್ತರವಾಗಿದ್ದವು. ಜಗತ್ತಿನ ಅತ್ಯಂತ ಪುರಾತನ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯಲ್ಲಿ ಪದ ಪ್ರಯೋಗಗಳ ಬಗ್ಗೆ, ವಾಕ್ಯ ರಚನೆಯ ಬಗ್ಗೆ ಅತ್ಯಂತ ವಿವರವಾಗಿ, ಸುಲಭವಾಗಿ ವಿವರಿಸುವ ಸಂಸ್ಕೃತ ಭಾಷಾ ವಿದ್ವಾಂಸ ಪಾಣಿನಿಯ ʼಅಷ್ಟಾಧ್ಯಾಯಿʼ ಗ್ರಂಥದಲ್ಲಿನ ನಿಯಮವೊಂದಕ್ಕೆ ಸಂಬಂಧಿಸಿದಂತೆ ಇದ್ದ ಕ್ಲಿಷ್ಟತೆಗೆ ಭಾರತೀಯ ಸಂಶೋಧನಾ ವಿದ್ಯಾರ್ಥಿ ರಿಷಿ ರಾಜಪೊಪಟ್ ಎಂಬಾತ ಪರಿಹಾರ ಕಂಡುಕೊಂಡಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ವೈರಲ್‌ ಆಗಿದ್ದವು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಭಾಷೆಯನ್ನು ಬಲ್ಲ ವಿದ್ವತ್‌ ವಲಯದಲ್ಲಿ ಈಗ ಚರ್ಚೆಗಳು ಎದ್ದಿವೆ.

ಪಾಣಿನಿಯ ಅಷ್ಟಾಧ್ಯಾಯಿಯಲ್ಲಿನ 2,500 ವರ್ಷಗಳಷ್ಟು ಹಳೆಯ ಭಾಷಾ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗಿದೆ ಎಂದು ಘೋಷಿಸುವುದಕ್ಕೂ ಮೊದಲು ಆ ಸಂಶೋಧನೆಯನ್ನು ವಿದ್ವಜ್ಜನರ ಎದುರು ಸಾದರಪಡಿಸಲಾಗಿಲ್ಲ. ಹಾಗಾಗಿ ಇದು ಸದ್ಯಕ್ಕೆ ಒಪ್ಪಿಕೊಳ್ಳುವಂಥದ್ದಲ್ಲ ಎಂದು ಬಲ್ಲವರು ಹೇಳುತ್ತಿದ್ದಾರೆ.

ಈ ಕುರಿತು ಅನೇಕ ವಿದ್ವಾಂಸರು ತಮ್ಮ ಟೀಕೆಗಳನ್ನು ವ್ಯಕ್ತಪಡಿಸಿದ್ದು, ಪಾಣಿನಿಯ ವ್ಯಾಕರಣದ ಕಂಪ್ಯೂಟರ್‌ ಅಳವಡಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಸಂಸ್ಕೃತ ವಿದ್ವಾಂಸ ಪ್ರೊ. ಎಂ. ಪೀಟರ್‌ ಸ್ಕಾರ್ಫ್‌ ಅವರು ಹೇಳಿದ್ದೇನೆಂದರೆ, “ರಿಷಿ ರಾಜಪೊಪಟ್ ಅವರು ಪಾಣಿನಿಯ ಮೂಲ ಸೂತ್ರ ʼವಿಪ್ರತಿಶೇತೇ ಪರಂ ಕಾರ್ಯಂʼ ಕುರಿತು ವಿಶ್ಲೇಷಿಸುವ ಮುನ್ನ ಅದರ ಕುರಿತು ಸಾಕಷ್ಟು ಪರಿಶೀಲನೆ ನಡೆಸಿಲ್ಲ. ಅವರು ನೀಡಿರುವ ಪರಿಹಾರವು ಬಹಳಷ್ಟು ಸಂದರ್ಭಗಳಲ್ಲಿ ನಿಷ್ಪ್ರಯೋಜನಕಾರಿಯಾಗಿದೆ. ಹಾಗಾಗಿ ಈ ಸ್ವಯಂಘೋಷಿತ ಪರಿಹಾರವನ್ನ ಮತ್ತಷ್ಟು ಪರೀಕ್ಷಿಸುವ ಅಗತ್ಯವಿದೆ” ಎಂದು.

ಪಾಣಿನಿಯ ವ್ಯಾಕರಣಶಾಸ್ತ್ರದ ಕುರಿತು ಹಲವಾರು ವರ್ಷಗಳಿಂದ ಬೋಧಿಸುತ್ತಿರುವ ಇನ್ನೋರ್ವ ವಿದ್ವಾಂಸ ನೀಲೇಶ್‌ ಬೋಡಾಸ್‌ ಅವರೂ ಕೂಡ “2,500 ವರ್ಷಗಳ ಭಾಷಾ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂಬುದನ್ನು ಅಥವಾ ಅಷ್ಟಾಧ್ಯಾಯಿಯ ಕುರಿತು ಮೊದಲು ವ್ಯಾಖ್ಯಾನಿಸಿದವರಲ್ಲೊಬ್ಬರಾದ ಕಾತ್ಯಾಯನ ಅವರು ತಪ್ಪಾಗಿ ಅರ್ಥೈಸಿದ್ದಾರೆ ಎಂಬುದನ್ನು ನಾನು ಒಪ್ಪಲಾರೆ. ಪಾಣಿನಿಯ ನಿಯಮಗಳ ಕುರಿತು ರಾಜಪೋಪಟ್ ತಪ್ಪಾಗಿ ಅರ್ಥೈಸಿಕೊಂಡಿರಬಹುದು” ಎಂದಿದ್ದಾರೆ.

ಇವರಿಬ್ಬರ ಮಾತಿನ ಒಟ್ಟಾರೆ ಸಾರವೇನೆಂದರೆ ಈ ಪರಿಹಾರವನ್ನು ಘೋಷಿಸುವ ಮೊದಲು ಅದನ್ನು ಸರಿಯಾಗಿ ಪರಿಶೀಲನೆಗೆ ಒಳಪಡಿಸಬೇಕು ಏಕೆಂದರೆ ಬಹಳಷ್ಟು ಸಂದರ್ಭಗಳಲ್ಲಿ ರಾಜಪೋಪಟ್ ಹೇಳಿರುವ ಪರಿಹಾರ ತಪ್ಪಾಗಿದೆ. ಈ ಕುರಿತು ಮರುಪರಿಶೀಲನೆಯ ಅಗತ್ಯವಿದೆ. ಇದನ್ನು ಒಪ್ಪಿಕೊಳ್ಳುವ ಮೊದಲು ಕನಿಷ್ಟ 1ಲಕ್ಷದಿಂದ 5 ಲಕ್ಷದಷ್ಟು ಸಮಸ್ಯೆಗಳಿಗೆ ಅನ್ವಯಿಸಿ ನೋಡಬೇಕು ಎಂಬುದು.

ಇನ್ನು ಸಂಸ್ಕೃತ ಭಾಷೆಯ ಕುರಿತು ದೇಶದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂಸ್ಥೆ ಸಂಸ್ಕೃತ ಭಾರತಿ ಕೂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು “ಈ ಸಂಶೋಧನೆಯು ಅತ್ಯಂತ ಕಿರಿದಾದ ಹಾಗು ದೂರದೃಷ್ಟಿಯಿಲ್ಲದ್ದಾಗಿದೆ. ವಿಶಾಲ ವ್ಯಾಪ್ತಿಯಲ್ಲಿ ಅದು ಅನ್ವಯಿಸುವುದಿಲ್ಲ” ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!