Wednesday, February 1, 2023

Latest Posts

ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸೀಟು ಖಚಿತ : ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಬೆಂಗಳೂರು:

ಸಂಘಟನೆ, ಕಾರ್ಯಕರ್ತರ ಶ್ರಮದಿಂದ ಶಿವಾಜಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸೀಟು ಪಡೆಯುವುದು ಖಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಬೆಂಗಳೂರಿನ ಶಿವಾಜಿನಗರದಲ್ಲಿ ಇಂದು ಬಿಜೆಪಿ ಬೂತ್ ವಿಜಯ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷವು ಬೂತ್ ಮಟ್ಟದ ವಿಜಯ ಸಾಧನೆಗೆ ಈ ಅಭಿಯಾನ ಆರಂಭಿಸಿದೆ. ಶಿವಾಜಿನಗರದಲ್ಲಿ ಬಿಜೆಪಿ ಜೈ ಆದಾಗ ಭಾರತ್ ಮಾತಾಕಿ ಜೈ ಆಗುತ್ತದೆ. ಶಿವಾಜಿನಗರದಲ್ಲಿ ನಾವು ಈ ಹಿಂದೆ ಗೆದ್ದಿದ್ದೆವು. ಅದನ್ನು ಪಕ್ಷದ ಕಾರ್ಯಕರ್ತರು ಮತ್ತೆ ಸಾಧಿಸಿ ತೋರಿಸಬೇಕು. ಸಂಘಟಿತ ಪ್ರಯತ್ನದಿಂದ ಇಲ್ಲಿ ಗೆಲುವು ಸಾಧನೆ ನೂರಕ್ಕೆ ನೂರು ಗ್ಯಾರಂಟಿ. ನಾನು ಈ ಕ್ಷೇತ್ರದ ವಿಜಯಕ್ಕಾಗಿ ಬಂದಿದ್ದೇನೆ ಎಂದು ತಿಳಿಸಿದರು.

ಮೆಟ್ರೋ 2 ನೇ ಹಂತ 2024ಕ್ಕೆ ಪೂರ್ಣವಾಗಲಿದೆ. ಮೂರನೇ ಹಂತಕ್ಕೆ ರೂ. 26 ಸಾವಿರ ಕೋಟಿ ಯೋಜನೆಗೆ ರಾಜ್ಯ ಕ್ಯಾಬಿನೆಟ್ ಅನುಮತಿ ಕೊಟ್ಟಿದೆ. ಸಬರ್ಬನ್ ರೈಲು ಆರಂಭಿಸಿದ್ದು, ಕಾವೇರಿ 5ನೇ ಹಂತದ ನೀರು ಕೊಡಲು ಮುಂದಾಗಿದ್ದು, ನೆನೆಗುದಿಗೆ ಬಿದ್ದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಆದರೆ, ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವುದು, ಪುರಾವೆ ಇಲ್ಲದೆ ಆರೋಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಸಂಸದ ಪಿ.ಸಿ.ಮೋಹನ್ ಅವರು ಮಾತನಾಡಿ, ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಎಂಬ ಅಮಿತ್ ಶಾ ಅವರ ಮಾತನ್ನು ಉಲ್ಲೇಖಿಸಿದರು. ಸಂಘಟನೆ ನಿರಂತರ ಇರಬೇಕೆಂಬ ಪಕ್ಷದ ಹಿರಿಯರ ಆಶಯವನ್ನು ಪಕ್ಷವು ಸದಾ ಪಾಲಿಸುತ್ತ ಬಂದಿದೆ ಎಂದು ವಿವರಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಭಾರಿ ಅಶ್ವತ್ಥನಾರಾಯಣ್, ಮಂಡಲ ಅಧ್ಯಕ್ಷ ಬಾಲಾಜಿ ಮಣಿ, ಮಾಜಿ ಕಾರ್ಪೊರೇಟರ್‍ಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!