October 10, 2026
Saturday, October 10, 2026
spot_img

ನೀವು ಕೇವಲ ಕಾಂಗ್ರೆಸ್ ಕ್ಷೇತ್ರಗಳಿಗೆ ಮಾತ್ರ ಸಿಎಂ ಆ?: ಅನುದಾನ ತಾರತಮ್ಯಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ಕಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರಿನ ಮೂಲಸೌಕರ್ಯ ಮತ್ತು ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾದ 2,000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರೇ, ನೀವು ಕೇವಲ ಕಾಂಗ್ರೆಸ್ ಪ್ರತಿನಿಧಿಸುವ ಕ್ಷೇತ್ರಗಳಿಗೆ ಮಾತ್ರ ಮುಖ್ಯಮಂತ್ರಿನಾ? ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.

ಅನುದಾನ ಹಂಚಿಕೆಯಲ್ಲಿ ತಾರತಮ್ಯ:

ಬೆಂಗಳೂರಿನ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ 2,000 ಕೋಟಿ ರೂ. ನಿಧಿಯಲ್ಲಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ನೂರಾರು ಕೋಟಿ ರೂ.ಗಳ ಭರಪೂರ ಅನುದಾನ ನೀಡಲಾಗಿದೆ. ಆದರೆ, ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಕೇವಲ ಬಿಡಿಗಾಸು ನೀಡಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.  

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಾದ ಚಾಮರಾಜಪೇಟೆ, ಗಾಂಧಿನಗರ, ವಿಜಯನಗರ, ಹೆಬ್ಬಾಳ ಮತ್ತು ಬ್ಯಾಟರಾಯನಪುರ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಲಾ 100 ಕೋಟಿ ರೂ. ನೀಡಲಾಗಿದೆ. ಆದರೆ, ಬಿಜೆಪಿ ಪ್ರತಿನಿಧಿಸುವ ರಾಜಧಾನಿಯ 16 ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೇವಲ 40 ಕೋಟಿಯಿಂದ 80 ಕೋಟಿ ರೂ. ಒಳಗೆ ಸೀಮಿತಗೊಳಿಸಲಾಗಿದೆ‌ ಎಂದು ದೂರಿದ್ದಾರೆ.

ಮಲತಾಯಿ ಧೋರಣೆ:

ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ವಾಸಿಸುವ ಲಕ್ಷಾಂತರ ಜನ ಬೆಂಗಳೂರಿಗರು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲವೇ? ಅವರಿಗೆ ರಸ್ತೆ ಮತ್ತು ಮೂಲಸೌಕರ್ಯ ಬೇಡವೇ?” ಎಂದು ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ:

ಚುನಾವಣೆಯಲ್ಲಿ ಜನತೆ ಪಾಠ ಕಲಿಸಲಿದ್ದಾರೆ

ಸರ್ಕಾರದ ಈ ಕ್ಷುಲ್ಲಕ ರಾಜಕೀಯ ದ್ವೇಷದ ನಿರ್ಧಾರದಿಂದಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ವಿಪಕ್ಷ ನಾಯಕ ಎಚ್ಚರಿಸಿದ್ದಾರೆ. ಈ ತಾರತಮ್ಯದ ಆಡಳಿತ ಮತ್ತು ದ್ವೇಷದ ರಾಜಕಾರಣವನ್ನು ಬೆಂಗಳೂರಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂಬರುವ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಯಲ್ಲಿ ರಾಜಧಾನಿಯ ನಾಗರಿಕರು ಕಾಂಗ್ರೆಸ್ ಪಕ್ಷಪಾತಿ ನಡೆಗೆ ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಆರ್. ಅಶೋಕ್ ಗುಡುಗಿದ್ದಾರೆ.

Must Read