ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂತ್ರಜ್ಞಾನ ಎಷ್ಟೇ ಬೆಳೆದರೂ ಸಿನಿಮಾ ಸೆಟ್‌ಗಳಲ್ಲಿ ಕಾರ್ಮಿಕರ ಸುರಕ್ಷತೆ ಇಂದಿಗೂ ಮರೀಚಿಕೆಯಾಗಿದೆ. ಇತ್ತೀಚೆಗೆ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆಂಡ್ ವಾರ್’ ಚಿತ್ರದ ಸೆಟ್‌ನಲ್ಲಿ ಚಂದ್ರಧಾರಿ ಸಿಂಗ್ ಯಾದವ್ ಎಂಬ ಕಾರ್ಮಿಕ ಮೃತಪಟ್ಟಿರುವುದು ಬಾಲಿವುಡ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಬನ್ಸಾಲಿ ವಿರುದ್ಧ ಎಫ್‌ಐಆರ್ ದಾಖಲಿಸಲು ಒತ್ತಾಯ
ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದೀಗ ‘ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್’ (AICWA) ಈ ಸಾವನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ದೇಶಕ ಬನ್ಸಾಲಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದೆ. ಸೆಟ್‌ನಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದೇ ಈ ದುರಂತಕ್ಕೆ ಕಾರಣ ಎಂದು ಸಂಘಟನೆ ಆರೋಪಿಸಿದೆ.
1 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ
AICWA ಅಧ್ಯಕ್ಷ ಸುರೇಶ್ ಶಾಮ್‌ಲಾಲ್ ಗುಪ್ತಾ ಪ್ರಕಾರ, ಮೃತ ಚಂದ್ರಧಾರಿ ಅವರು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಅವರು ಕುಟುಂಬದ ಏಕೈಕ ಆಧಾರವಾಗಿದ್ದರಿಂದ, ಅವರ ಕುಟುಂಬಕ್ಕೆ ತಕ್ಷಣವೇ 1 ಕೋಟಿ ರೂಪಾಯಿ ಆರ್ಥಿಕ ಪರಿಹಾರ ನೀಡಬೇಕು ಮತ್ತು ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒಕ್ಕೂಟವು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ದೊಡ್ಡ ಬಜೆಟ್ ಚಿತ್ರಗಳಲ್ಲೂ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ಚಿತ್ರರಂಗದ ಕರಾಳ ಮುಖವನ್ನು ಬಯಲು ಮಾಡಿದೆ.



