ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಪೊಲೀಸರಿಗೂ ರಕ್ಷಣೆ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಮೈಸೂರಿನಲ್ಲಿ ಇತ್ತೀಚೆಗೆ ಪೊಲೀಸ್ ಠಾಣೆಯ ಮೇಲೆಯೇ ದಾಳಿ ನಡೆದಿದ್ದರೆ, ಇತ್ತ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೆನಿಸಿಕೊಂಡವರು ಪೊಲೀಸರ ಕರ್ತವ್ಯಕ್ಕೇ ಅಡ್ಡಿಪಡಿಸುತ್ತಿದ್ದಾರೆ.
ಶಾಸಕರ ಆಪ್ತ ವಲಯದ ವ್ಯಕ್ತಿಯೊಬ್ಬರು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೇ ಧಮ್ಕಿ ಹಾಕುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಣ್ಣಪುಟ್ಟ ವಿಷಯಗಳ ಮೇಲೂ ಕಣ್ಣಿಟ್ಟು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿರುವ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ತನ್ನ ಸಿಬ್ಬಂದಿಗಳಿಗೇ ಬೆದರಿಕೆ ಹಾಕುತ್ತಿರುವ ವ್ಯಕ್ತಿಯ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೇ ಬದುಕಲು ಇಷ್ಟೊಂದು ಕಷ್ಟವಿರುವಾಗ ಜನಸಾಮಾನ್ಯರ ಗತಿಯೇನು ಎಂಬ ಆತಂಕ ಜನರಲ್ಲಿ ಮೂಡಿತ್ತು.
ಪ್ರಕರಣ ದಾಖಲು
ಇದೀಗ ಗೋಣಿಕೊಪ್ಪ ಪೊಲೀಸರು ನಾಮೇರ ಅಂಕಿತ್ ಪೊನ್ನಪ್ಪ ಹಾಗೂ ನಾಮೇರ ಅಪ್ಪಣ್ಣ ಎಂಬವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.