ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಕು ನಾಯಿಯನ್ನು ಕುಟುಂಬ ದ ಸದಸ್ಯರಂತೆಯೇ ಕಾಣುವವರಿದ್ದಾರೆ. ಅದು ಸತ್ತರೂ ತಮ್ಮದೇ ಮನೆಯ ಸದಸ್ಯರು ಆಗಲಿದ್ದಾರೇನೋ ಎಂಬಂತೆ ದುಃಖ ಪಡುವವರೂ ಇದ್ದಾರೆ. ಇಂತಹದ್ದೇ ಒಂದು ಶ್ವಾನ ಪ್ರೇಮದ ಅಪರೂಪದ ಪ್ರಸಂಗವೊಂದು ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಮಣಿಪುರದಲ್ಲಿ ನಡೆದಿದೆ..!
ಕೆಲವು ದಿನಗಳ ಹಿಂದೆ ಸತ್ತು ಹೋಗಿದ್ದ ಸಾಕು ನಾಯಿಯನ್ನು ದಫನ ಮಾಡಿದ ಬಳಿಕವೂ ಮಾಲಕಿ ಪೊಲೀಸರಿಗೆ ದೂರು ನೀಡಿ ಹೊರ ತೆಗೆಸಿ ಪೋಸ್ಟ್ ಮಾರ್ಟಮ್ ಮಾಡಿಸಿದ್ದಾರೆ.
ಕಾಪುವಿನ ಸಾಮಾಜಿಕ ಕಾರ್ಯಕರ್ತೆ ಮಣಿಪುರ ಬಡಗುಮನೆಯ ಬಿಂದು ಶೆಟ್ಟಿ ಅವರ ಸಾಕು ನಾಯಿ ಸತ್ತು ಹೋಗಿತ್ತು. ಅವರು ಅದನ್ನು ಮನೆಯ ವಠಾರದಲ್ಲಿ ಹೂತು ಹಾಕಿದ್ದರು. ಆದರೆ ತಮ್ಮ ಪ್ರೀತಿಯ ಸಾಕುನಾಯಿಗೆ ಫೆ.೨೧ ರ ರಾತ್ರಿ ೧೧ರಿಂದಂದ ಫೆ.೨೨ರ ಬೆಳಿಗ್ಗೆ ೭ ಒಳಗೆ ಯಾರೋ ಆಹಾರದಲ್ಲಿ ವಿಷ ಹಾಕಿ ಕೊಂದಿದ್ದಾರೆ ಎಂಬ ಅನುಮಾನ ಬಲವಾಗಿ ಕಾಡಿತ್ತು. ತಕ್ಷಣ ಅವರು ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಕಾರಣ ಕಾನೂನು ಪ್ರಕ್ರಿಯೆ, ಮತ್ತು ವೈದ್ಯಕೀಯ ಪರೀಕ್ಷೆ ನಡೆಸಬೇಕಾಯಿತು.
ಹೆಡ್ ಕಾನ್‌ಸ್ಟೇಬಲ್‌ಗಳಾದ ಅರುಣ್ ಉಪ್ಪೂರು, ಸುಧಾಕರ್ ನಾಯ್ಕ್ ಹಾಗೂ ಪ್ರಾಣಿ ದಯಾ ಸಂಘದ ಮಂಜುಳಾ ಅವರ ಸಮಕ್ಷಮದಲ್ಲಿ ನಾಯಿಯ ಕಳೇಬರವನ್ನು ಮೇಲಕ್ಕೆತ್ತಲಾಯಿತು.
ಪೊಲೀಸರು ನಾಯಿಯ ಕಳೇಬರವನ್ನು ನಿತ್ಯಾನಂದ ಒಳಕಾಡು ಆವರ ಮನೆಯಲ್ಲಿರುವ ವಿದ್ಯುತ್ ಚಾಲಿತ ರಕ್ಷಣಾ ಪಟ್ಟಿಗೆಯಲ್ಲಿ ಇಟ್ಟು ಮರುದಿನ ಬೈಲೂರು ಪಶು ಆಸ್ಪತ್ರೆಗೆ ಸಾಗಿಸಿದರು.
ಪಶುವೈದ್ಯ ಡಾ.ಚಂದ್ರಕಾಂತ್ ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿ ಬರಬೇಕಿದೆ.