November 20, 2026
Friday, November 20, 2026
spot_img

ಹಿರಿಯರ ಅನುಭವಕ್ಕೆ ಕಿಮ್ಮತ್ತಿಲ್ಲವೇ? ಟೀಮ್ ಇಂಡಿಯಾ ತಂತ್ರವನ್ನು ‘ಹುಚ್ಚುತನ’ ಎಂದ ಅಶ್ವಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟಿರುವ ನಿರ್ಧಾರ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ನಾಯಕ ಶುಭ್​ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಈ ಆಯ್ಕೆ ತಂತ್ರವನ್ನು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರವಾಗಿ ಖಂಡಿಸಿ, “ಸಂಪೂರ್ಣ ಹುಚ್ಚುತನ” ಎಂದು ಕರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಹಿಂದಿನ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ 516 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದ್ದರು. ಮತ್ತೊಂದೆಡೆ, ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಸಿರಾಜ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮಿಂಚಿದ್ದಾರೆ (43 ವಿಕೆಟ್). ವಿದೇಶಿ ನೆಲದಲ್ಲಿ ದೀರ್ಘ ಓವರ್ ಬೌಲಿಂಗ್ ಮಾಡುವ ಮತ್ತು ವಿಕೆಟ್ ತೆಗೆಯುವ ಸಾಮರ್ಥ್ಯವಿರುವ ಸಿರಾಜ್ ಹಾಗೂ ಆಲ್‌ರೌಂಡ್ ಶಕ್ತಿಯಾದ ಜಡೇಜಾ ಅವರನ್ನು ಹೊರಗಿಟ್ಟಿರುವುದು ನ್ಯಾಯಸಮ್ಮತವಲ್ಲ ಎಂಬುದು ಅಶ್ವಿನ್ ವಾದವಾಗಿದೆ.

ಭಾರತ ಕ್ರಿಕೆಟ್‌ಗೆ ಸಿರಾಜ್ ಮತ್ತು ಜಡೇಜಾ ನೀಡಿರುವ ಕೊಡುಗೆ ಅಪಾರವಾಗಿದೆ. ಅಂತಹ ಮ್ಯಾಚ್-ವಿನ್ನರ್ ಆಟಗಾರರನ್ನು ಮೊದಲೇ ಬೆಂಚ್‌ನಲ್ಲಿ ಕೂರಿಸುವ ಬದಲು, ಮೈದಾನಕ್ಕಿಳಿಸಿ ಆಡುವ ಅವಕಾಶ ನೀಡಬೇಕಿತ್ತು. ಆಡಿ ತಮ್ಮದೇ ಹಾದಿಯಲ್ಲಿ ವಿಫಲವಾದರೆ ಮಾತ್ರ ಪ್ರಶ್ನಿಸಬೇಕು. ಕಾರಣವಿಲ್ಲದೆ ಹೊರಗಿಡುವುದು ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಅಶ್ವಿನ್ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶ್ವಿನ್, ಇದು ಅತ್ಯಂತ ಕಠಿಣ ನಿರ್ಧಾರವಾದರೂ ಈಗ ಭಾರತ ತಂಡದಲ್ಲಿ ಇದೇ ‘ನ್ಯೂ ನಾರ್ಮಲ್’ ಆಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವುದು ಒಳ್ಳೆಯದೇ ಆದರೂ, ಅನುಭವ ಮತ್ತು ಫಾರ್ಮ್ ಅನ್ನು ಸಂಪೂರ್ಣವಾಗಿ ಕಡೆಗಣಿಸುವುದು ತಂಡದ ಸಮತೋಲನಕ್ಕೆ ಧಕ್ಕೆ ತರಬಹುದು. ಮೊದಲ ಟೆಸ್ಟ್‌ನಲ್ಲಿ ಎದುರಾದ ಹಿನ್ನಡೆಯ ಬಳಿಕ ಮುಂದಿನ ಪಂದ್ಯಗಳಲ್ಲಿ ಮ್ಯಾನೇಜ್‌ಮೆಂಟ್ ತನ್ನ ನಿಲುವು ಬದಲಾಯಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

Must Read

Skip to toolbar