Monday, August 8, 2022

Latest Posts

ಸರಸ್ವತೀ ನದಿಯನ್ನು ಪುನಶ್ಚೇತನ ಮಾಡಲಿದೆಯೇ ಈ ಅಣೆಕಟ್ಟೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶತಮಾನಗಳಿಂದ ಗುಪ್ತಗಾಮಿನಿಯಾಗಿರುವ, ಸರಸ್ವತೀ ನದಿ ಭವಿಷ್ಯದಲ್ಲಿ ಸಹಜ ಹರಿವು ಪಡೆಯಲಿದೆಯೇ? ಇತ್ತೀಚೆಗೆ ಅಂದ್ರೆ ಜ. 21ರಂದು ಹರ್ಯಾಣ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ಹಿಮಾಚಲ ಪ್ರದೇಶದ ಸೋಂಬ್ ನದಿಗೆ ಆದಿ ಬದರಿಯಲ್ಲಿ ಅಣೆಕಟ್ಟೆ ನಿರ್ಮಾಣ ಮತ್ತು ಸರಸ್ವತೀ ನದಿ ಜೋಡಣೆ ಯೋಜನೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿವೆ.

ಸರಸ್ವತೀ ಪಾತ್ರದಲ್ಲಿ ಅಂತರ್ಜಲ ಹೆಚ್ಚಿಸುವ ಆಶಯ

ಇದರಿಂದ ಸರಸ್ವತಿ ಮತ್ತೆ ನದಿಯಾಗಿ ಹರಿಯುತ್ತದೆ ಅಂತಲ್ಲ. ಆದರೆ, ಒಂದೊಮ್ಮೆ ಸರಸ್ವತಿ ನದಿ ಹರಿದಿದ್ದ ಮಾರ್ಗದಲ್ಲಿ ಅಂತರ್ಜಲ ವೃದ್ಧಿಯಾಗಬಹುದು ಎಂಬುದು ಇದರ ಹಿಂದಿರುವ ಆಶಯ.

ಆದಿ ಬದರಿ ಅಣೆಕಟ್ಟೆ ನಿರ್ಮಾಣದಿಂದ ಸಂಗ್ರಹವಾಗಿರುವ ನೀರನ್ನು ಪ್ರಾಥಮಿಕವಾಗಿ ಸರಸ್ವತಿ ನದಿಯ ಪುನರುಜ್ಜೀವನ ಮತ್ತು ಸರಸ್ವತಿ ಪರಂಪರೆಯ ಅಭಿವೃದ್ಧಿಗಾಗಿ ಯೋಜಿಸಲಾಗಿದೆ. ಇದಲ್ಲದೆ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಕುಡಿಯುವ ಮತ್ತು ನೀರಾವರಿಗಾಗಿ ವರ್ಷಕ್ಕೆ 61.88 ಹೆಕ್ಟೇರ್-ಮೀಟರ್ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಜೊತೆಗೆ ಅಧಿಕ ಮಳೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಅಣೆಕಟ್ಟೆ ಸಹಾಯ ಮಾಡುತ್ತದೆ. ಅಣೆಕಟ್ಟೆಯ ಬಳಿ ಕೆರೆಯನ್ನೂ ನಿರ್ಮಿಸಲಾಗುತ್ತಿದ್ದು, ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

ಸರಸ್ವತೀ ನದಿ ಕೇವಲ ಕಲ್ಪನೆಯಲ್ಲ ಅಂತ ವಿಜ್ಞಾನವೇ ಹೇಳಿದೆ

ಸರಸ್ವತೀ ನದಿ ಎಂಬುದು ಕೇವಲ ಮಿಥ್ಯಾಕಲ್ಪನೆ ಎಂಬ ವಾದವನ್ನು ಹಲವು ವರ್ಷಗಳವರೆಗೆ ಪ್ರತಿಪಾದಿಸಲಾಗುತ್ತಿತ್ತು. ಆದರೆ ಹಿಂದುಗಳ ಪ್ರಜ್ಞೆಯಲ್ಲಿ ಭದ್ರವಾಗಿರುವ ಸರಸ್ವತೀ ನದಿ ನಿಜಕ್ಕೂ ಹರಿದಿತ್ತು ಎಂಬ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪುರಾವೆಗಳನ್ನು ಕಾಣಬಹುದು.

ಕನ್ನಡದ ವಿಜ್ಞಾನ ಬರಹಗಾರ, ಭೂಗರ್ಭ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಪರಿಣತಿಯನ್ನೂ ಹೊಂದಿರುವ ಟಿ ಆರ್ ಅನಂತರಾಮು ಅವರು ಈ ಬಗ್ಗೆ ವೈಜ್ಞಾನಿಕ ಆಧಾರಗಳ ಮಾಹಿತಿ ಹೊತ್ತ ಪುಸ್ತಕವನ್ನೇ ಬರೆದಿದ್ದಾರೆ.

ಈಗೇರಡು ವರ್ಷಗಳ ಹಿಂದೆ ವಿಜ್ಞಾನಕ್ಕೆ ಮೀಸಲಾಗಿರುವ ಪ್ರಖ್ಯಾತ ಅಂತಾರಾಷ್ಟ್ರೀಯ ಅಧ್ಯಯನ ಮಾಸಿಕ ‘ನೇಚರ್’ ಸಹ ಸರಸ್ವತೀ ನದಿಯ ಗತದ ಇರುವಿಕೆ ಪುಷ್ಟೀಕರಿಸುವ ವೈಜ್ಞಾನಿಕ ಪ್ರಬಂಧವನ್ನು ಪ್ರಕಟಿಸಿತ್ತು.

ಸರಸ್ವತಿ ನದಿಯ ಕುರಿತು 1986-87ರಿಂದ ಸಂಶೋಧನೆ ಪ್ರಾರಂಭವಾಗಿದೆ. ಯಮುನಾ ನಗರದ ಆದಿ ಬದರಿಯಿಂದ ಆರಂಭವಾದ ಸಂಶೋಧನೆಯು ಕಚ್‌ವರೆಗೆ ತಲುಪಿದೆ. ಕುರುಕ್ಷೇತ್ರ ವಿಶ್ವವಿದ್ಯಾಲಯ ಮತ್ತು ಹರ್ಯಾಣ ಸರಸ್ವತಿ ಪರಂಪರೆ ಅಭಿವೃದ್ಧಿ ಮಂಡಳಿಯಿಂದ ಸರಸ್ವತಿ ನದಿಯ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಉಪಗ್ರಹ ಚಿತ್ರಗಳು, ಐತಿಹಾಸಿಕ ನಕ್ಷೆಗಳು, ಜಲ-ಭೂವೈಜ್ಞಾನಿಕ ಡೇಟಾ ಸಹಿತ ಅನೇಕ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ಸಂಶೋಧನೆ ಮುಂದುವರಿದಿದೆ.

ಭಕ್ತಿಬಿಂದುವಾಗಿ ಸರಸ್ವತೀ ನದಿ

ಧಾರ್ಮಿಕ ಪ್ರಜ್ಞೆಯಲ್ಲಿ ಸರಸ್ವತೀ ನದಿ ಯಾವತ್ತೂ ಜೀವಂತ. ಸರಸ್ವತಿಯು ಋಗ್ವೇದದಲ್ಲಿ ಮತ್ತು ನಂತರದ ವೈದಿಕ ಹಾಗೂ ವೇದೋತ್ತರ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂದು ದೈವಿಕ ನದಿ. ಹಿಂದು ಧರ್ಮದಲ್ಲಿ ನದಿಯು ಮಹತ್ವದ ಪಾತ್ರ ವಹಿಸಿದೆ. ಸರಸ್ವತಿ ಹಿಮಾಲಯದ ಕಪಾಲ್ ತಿರಿತ್‌ನಿಂದ ಹುಟ್ಟಿ, ಮಾನಸ ಸರೋವರದ ಕಡೆಗೆ ಹರಿಯಿತು. ಮುಂದೆ ಪಶ್ಚಿಮಕ್ಕೆ ತಿರುಗಿದ ನದಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಗುಜರಾತ್ ಮೂಲಕ ಹರಿಯುತ್ತಿತ್ತು. ಸರಸ್ವತಿ ಪಾಕಿಸ್ತಾನದ ಮೂಲಕವೂ ಹರಿದು, ರಾನ್ ಆಫ್ ಕಚ್ ಮೂಲಕ ಪಶ್ಚಿಮ ಸಮುದ್ರ ಸೇರಿತು. ನದಿಯು ಸುಮಾರು 4,000 ಕಿ.ಮೀ. ಉದ್ದವಿತ್ತು. ಆದರೆ ಈಗ ಸರಸ್ವತಿ ನದಿ ಒಣಗಿದೆ.  ಹಿಂದುಗಳು ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಎಂದು ನಂಬಿದ್ದಾರೆ.

ಏನಿದು ಆದಿ ಬದರಿ ಅಣೆಕಟ್ಟೆ ಯೋಜನೆ?

* ಅಣೆಕಟ್ಟೆ ಪೌರಾಣಿಕ ಸರಸ್ವತಿ ನದಿಯನ್ನು ಪುನರುಜ್ಜೀವನಗೊಳಿಸುತ್ತದೆ.

* ಇದು ಹಿಮಾಚಲ ಪ್ರದೇಶದ ಗಡಿಯ ಸಮೀಪ ಹರ್ಯಾಣದಲ್ಲಿ ನಿರ್ಮಾಣವಾಗಲಿದೆ.

* ಈ ಸ್ಥಳವನ್ನು ನದಿ ಮೂಲ ಎಂದು ಪರಿಗಣಿಸಲಾಗಿದೆ.

* ಸರಸ್ವತಿ ನದಿಯ ಪುನರುಜ್ಜೀವನದೊಂದಿಗೆ, ಧಾರ್ಮಿಕ ನಂಬಿಕೆಗಳು ಸಹ ಪುನರುಜ್ಜೀವನಗೊಳ್ಳುತ್ತವೆ.

* ಕ್ಷೇತ್ರವನ್ನು ಯಾತ್ರಾ ಸ್ಥಳವಾಗಿಯೂ ಅಭಿವೃದ್ಧಿಪಡಿಸಲಾಗುವುದು.

* ಹಿಮಾಚಲ ಪ್ರದೇಶದಲ್ಲಿ 31.66 ಹೆಕ್ಟೇರ್ ಭೂಮಿಯಲ್ಲಿ ಅಣೆಕಟ್ಟೆ ನಿರ್ಮಾಣವಾಗಲಿದೆ. ಇದರ ಅಗಲ 101.06 ಮೀಟರ್ ಮತ್ತು ಎತ್ತರ 20.5 ಮೀಟರ್.

* ಯೋಜನೆಯ ಒಟ್ಟು ವೆಚ್ಚ ₹ 215.33 ಕೋಟಿ ರೂ.

* ಯಮುನಾ ನಗರದ ಆದಿ ಬದರಿ ಬಳಿ ಯಮುನಾ ನದಿ ಸೇರುವ ಸೋಂಬ್ ನದಿಯಿಂದ ಆದಿ ಬದರಿ ಅಣೆಕಟ್ಟೆ ನೀರು ಪಡೆಯುತ್ತದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss