September 15, 2026
Tuesday, September 15, 2026
spot_img

ಉಮರ್ ಖಾಲಿದ್ ರಾಷ್ಟ್ರೀಯವಾದಿಯೇ? ಬಿ.ಕೆ. ಹರಿಪ್ರಸಾದ್‌ ಬಳಿ ಸ್ಪಷ್ಟನೆ ಕೇಳಿದ ದರ್ಶನ್ ಹೆಗಡೆ

ಹೊಸದಿಗಂತ ವರದಿ ಹುಬ್ಬಳ್ಳಿ :

ಗ್ಲೋರಿಫೈಯಿಂಗ್ ಟೆರರಿಸ್ಟ್ ಅಫ್ಜಲ್ ಗುರು ವನ್ನು ಬಹಿರಂಗವಾಗಿ ಬೆಂಬಲಿಸಿದ್ದ, ಭಾರತದ ಅಖಂಡತೆಗೆ ಧಕ್ಕೆ ಬರುವ ಕಾರ್ಯ ಮಾಡಿದ್ದ ಉಮರ್ ಖಾಲಿದ್ ರಾಷ್ಟ್ರೀಯವಾದಿಯೇ ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಲಿ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ್ ಹೆಗಡೆ ಒತ್ತಾಯಿಸಿದ್ದಾರೆ.

ಹರಿಪ್ರಸಾದ್ ಅವರು ಉಮರ್ ಖಾಲಿದ್ ಅವರನ್ನು “ರಾಷ್ಟ್ರೀಯವಾದಿ” ಎಂದು ಪ್ರಮಾಣೀಕರಿಸಿರುವುದು ಕಾಂಗ್ರೆಸ್‌ನ ಸಂಪೂರ್ಣ ಬೌದ್ಧಿಕ ದಿವಾಳಿತನವನ್ನು ಬಹಿರಂಗಪಡಿಸಿದೆ.2001ರ ಭಾರತೀಯ ಸಂಸತ್ ಮೇಲಿನ ಭೀಕರ ದಾಳಿಯ ಪ್ರಮುಖ ಸಂಚುಕೋರ ಹಾಗೂ ಶಿಕ್ಷೆಗೆ ಗುರಿಯಾದ ಭಯೋತ್ಪಾದಕ ಅಫ್ಜಲ್ ಗುರು ಅವರನ್ನು ಬಹಿರಂಗವಾಗಿ ಬೆಂಬಲಿಸಿ, ಅವರ ಪರವಾಗಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವ್ಯಕ್ತಿಯನ್ನು ರಾಷ್ಟ್ರೀಯವಾದಿ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರು ಹೇಗೆ ಕರೆಯಲು ಸಾಧ್ಯ.ಸಂಸತ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಬೆಂಬಲಿಸುವುದು “ರಾಷ್ಟ್ರೀಯವಾದ”ವೇ?ಬಿ.ಕೆ. ಹರಿಪ್ರಸಾದ್ ಅವರ ದೃಷ್ಟಿಯಲ್ಲಿ ಉಮರ್ ಖಾಲಿದ್ “ರಾಷ್ಟ್ರೀಯವಾದಿ”ಯಾಗಿದ್ದರೆ, ಅಫ್ಜಲ್ ಗುರು ಅವರನ್ನು ಗೌರವಿಸಿ, ವೈಭವೀಕರಿಸುವ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷವೂ ಬೆಂಬಲಿಸುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

“ಭಾರತ್ ತೇರೆ ತುಕ್ಡೇ ಹೋಂಗೆ” ಎಂಬ ಘೋಷಣೆಯೊಂದಿಗೆ ನೀವು ನಿಂತಿದ್ದೀರಾ?

2020ರ ದೆಹಲಿ ಗಲಭೆಗಳಿಗೆ ಕಾರಣವಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎದ್ದ ಭಾರತವಿರೋಧಿ ಹಿಂಸಾತ್ಮಕ, ಘೋಷಣೆಗಳನ್ನು ಮತ್ತು ಉದ್ದೇಶಪೂರ್ವಕ ಪ್ರಚೋದನೆಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ? ಗಂಭೀರ ಯುಎಪಿಎ ಭಯೋತ್ಪಾದನಾ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಪ್ರಮಾಣಪತ್ರ ನೀಡುವುದು, ಕಾಂಗ್ರೆಸ್‌ನ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿನ ಸಂಪೂರ್ಣ ರಾಜಿಗೆ ಸಾಕ್ಷಿಯಾಗಿದೆ.

ಎನ್‌ಎಲ್‌ಎಸ್‌ಐಯುನಂತಹ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯವನ್ನು ವಿಭಜಕ ವ್ಯಕ್ತಿಗಳನ್ನು ವೈಭವೀಕರಿಸಲು ಏಕೆ ಬಳಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸುವ ಬದಲು, ವಿಷಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳಿಂದ ಉಮರ್ ಖಾಲಿದ್ ಅವರ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

ಸ್ವಾಮಿ ವಿವೇಕಾನಂದ ಸೇರಿದಂತೆ ರಾಷ್ಟ್ರನಿರ್ಮಾಣಕ್ಕೆ ಪ್ರೇರಣೆ ನೀಡಿದ ರಾಷ್ಟ್ರೀಯವಾದಿ ಮಹನೀಯರೇ ಭಾರತದ ಯುವಜನತೆಗೆ ಆದರ್ಶರಾಗಬೇಕು ಎಂಬುದು ಎಬಿವಿಪಿಯ ದೃಢ ನಿಲುವಾಗಿದೆ.
ಎನ್‌ಎಲ್‌ಎಸ್‌ಐಯುನಲ್ಲಿ ನಡೆಯುತ್ತಿರುವ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !