ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಾಯನ್ಸ್ ಸಾಮ್ರಾಜ್ಯದ ಉತ್ತರಧಿಕಾರಿ ಇಶಾ ಅಂಬಾನಿ (Isha Ambani) ಸೇರಿದಂತೆ ಮೂವರನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್ನ ನಿರ್ದೇಶಕರನ್ನಾಗಿ ನೇಮಕ ಮಾಡುವುದಕ್ಕೆ ಆರ್ಬಿಐ ಅನುಮೋದನೆ ನೀಡಿದೆ.
ಇಶಾ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರನ್ನು ಜೆಎಫ್ಎಸ್ಎಲ್ನ (Jio Financial Services) ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಆರ್ಬಿಐ ಅನುಮತಿ ನೀಡಿದ್ದು, 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಅಷ್ಟರೊಳಗೆ ಜೆಎಫ್ಎಸ್ಎಲ್ ಸಂಸ್ಥೆ ಈ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದರೆ, ಯಾಕೆ ನೇಮಕಾತಿ ಆಗಿಲ್ಲ ಎಂದು ಕಾರಣ ತಿಳಿಸಿ ಮತ್ತೊಮ್ಮೆ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು ಎಂದು ಆರ್ಬಿಐ ತನ್ನ ಪತ್ರದಲ್ಲಿ ತಿಳಿಸಿದೆ.
ಇಶಾ ಅಂಬಾನಿ ಅವರು ಮುಕೇಶ್ ಅಂಬಾನಿಯ ಹಿರಿಯ ಮಗಳು. 32 ವರ್ಷದ ಅವರು ಮತ್ತು ಆಕಾಶ್ ಅಂಬಾನಿ ಇಬ್ಬರೂ ಕೂಡ ಅವಳಿಜವಳಿ. ಅನಂತ್ ಅಂಬಾನಿ ಮೂರನೇ ಮಗ. ಈ ಮೂವರೂ ಕೂಡ ಕಳೆದ ತಿಂಗಳು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮಂಡಳಿ ಸದಸ್ಯರಾಗಿ ನೇಮಕವಾಗಿದ್ದರು.
ಆಕಾಶ್ ಅಂಬಾನಿ ಅವರು ಜಿಯೋ ಇನ್ಫೋಕಾಮ್ನ ಛೇರ್ಮನ್ ಆಗಿ ಜವಾಬ್ದಾರಿ ಪಡೆದಿದ್ದಾರೆ. ಇಶಾ ಅಂಬಾನಿ ರಿಲಾಯನ್ಸ್ ರೀಟೇಲ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ.