ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾಲೆಸ್ತಿನ್ ಜೊತೆ ಲೆಬೆನಾನ್ ಹಾಗೂ ಲೆಬೆನಾನ್ ಹೆಜ್ಬೊಲ್ಲಾ ಉಗ್ರ ಪಡೆಯ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ದಾಳಿ ನಡೆಸುತ್ತಿದೆ. ಇಂದು ಹೆಜ್ಬೊಲ್ಲಾ ಉಗ್ರರ ಕ್ಯಾಂಪ್ ಮೇಲೆ ಇಸ್ರೇಲ್ ಸೇನೆ ವಾಯು ದಾಳಿ ನಡೆಸಿದೆ.
ಲೆಬೆನಾನ್ ಆರೋಗ್ಯ ಸಚಿವರು ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಇಸ್ರೇಲ್ ಏರ್‌ಸ್ಟ್ರೈಕ್‌ನಿಂದ ಲೆಬೆನಾನ್‌ನಲ್ಲಿ 100 ಮಂದಿ ಮೃತಪಟ್ಟಿದ್ದರೆ, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾರೆ.
ಕಳೆದ 7 ದಿನದಲ್ಲಿ 150 ಮಂದಿ ಇಸ್ರೇಲ್ ದಾಳಿಯಿಂದ ಮೃತಪಟ್ಟಿದ್ದಾರೆ. ಪೇಜರ್ ಸ್ಫೋಟ ದಾಳಿಗೂ ಮೊದಲು ಅಂದರೆ ಕಳೆದ ವರ್ಷ ಅಕ್ಟೋಬರ್‌ನಿಂದ 2024ರ ಸೆಪ್ಟೆಂಬರ್ 15ರ ವರೆಗೆ ಲೆಬೆನಾನ್‌ನಲ್ಲಿ ಇಸ್ರೇಲ್ ದಾಳಿಯಿಂದ 600 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 100 ಮಂದಿ ನಾಗರೀಕರಾಗಿದ್ದರೆ, ಸುಮಾರು 500ಕ್ಕೂ ಹೆಚ್ಚು ಮಂದಿ ಉಗ್ರರರಾಗಿದ್ದಾರೆ. ಹೆಜ್ಬೊಲ್ಲಾ ಉಗ್ರರ ಸಂಪೂರ್ಣ ಸರ್ವನಾಶಮಾಡಲು ಪಣತೊಟ್ಟಿರುವ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ.
ನಾವು ಲೆಬನಾನ್‌ನಲ್ಲಿ ನಮ್ಮ ದಾಳಿಯನ್ನು ತೀವ್ರಗೊಳಿಸುತ್ತಿದ್ದೇವೆ. ಉತ್ತರದ ನಿವಾಸಿಗಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸುವ ನಮ್ಮ ಗುರಿಯನ್ನು ಸಾಧಿಸುವವರೆಗೆ ಕ್ರಮಗಳು ಮುಂದುವರಿಯುತ್ತವೆ ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಇಂದು ತಮ್ಮ ಕಚೇರಿ ಪ್ರಕಟಿಸಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಲೆಬನಾನ್‌ನ ದಕ್ಷಿಣ, ಪೂರ್ವ ಬೆಕಾ ಕಣಿವೆ ಮತ್ತು ಸಿರಿಯಾ ಬಳಿಯ ಉತ್ತರ ಪ್ರದೇಶದಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾವನ್ನು ಇಸ್ರೇಲಿ ಮಿಲಿಟರಿ ಗುರಿಯಾಗಿಸಿದೆ .
ಇಂದು ಇಸ್ರೇಲ್‌ನ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಮತ್ತು ವೈದ್ಯರು ಸೇರಿದಂತೆ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೈರುತ್‌ನ ದಕ್ಷಿಣ ಉಪನಗರದಲ್ಲಿ ಶುಕ್ರವಾರ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯು ಹಿರಿಯ ಹಿಜ್ಬುಲ್ಲಾ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು 45 ಜನರನ್ನು ಕೊಂದಿದೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಹಿರಿಯ ನಾಯಕ ಇಬ್ರಾಹಿಂ ಅಖಿಲ್ ಮತ್ತು ಇನ್ನೊಬ್ಬ ಕಮಾಂಡರ್ ಅಹ್ಮದ್ ವಹ್ಬಿ ಸೇರಿದಂತೆ ಗುಂಪಿನ 16 ಸದಸ್ಯರು ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ.