Saturday, December 9, 2023

Latest Posts

ಇಸ್ರೇಲಿನಿಂದ ಭಾರತಸ್ನೇಹಿ ನಡೆ- ಪಾಕಿಸ್ತಾನದ ಲಶ್ಕರೆ ತಯ್ಬಾ ಉಗ್ರ ಸಂಘಟನೆ ಎಂದು ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನವೆಂಬರ್ 26ರ ಮುಂಬೈ ದಾಳಿಯ ಕಹಿ ನೆನಪಿನ 15ನೇ ವಾರ್ಷಿಕ ದಿನಕ್ಕೂ ಮುಂಚೆ, ಪಾಕಿಸ್ತಾನಿ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾವನ್ನು ಇಸ್ರೇಲ್ ತನ್ನ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸಿರುವುದಾಗಿ ಘೋಷಿಸಿದೆ.

ಈ ಬಗ್ಗೆ ಭಾರತ ಸರ್ಕಾರದ ಕಡೆಯಿಂದ ನಿರ್ದಿಷ್ಟ ಮನವಿ ಇಲ್ಲದಿದ್ದರೂ ಇಸ್ರೇಲ್ ಸ್ವಯಂಪ್ರೇರಿತವಾಗಿ ಇಂಥದೊಂದು ನಡೆ ಅನುಸರಿಸಿರುವುದು ವಿಶೇಷ.

ಲಷ್ಕರ್-ಎ-ತೊಯ್ಬಾವನ್ನು ಇಸ್ರೇಲಿನ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಎಲ್ಲ ವಿಧಿವಿಧಾನಗಳನ್ನು ಪೂರೈಸಿರುವುದಾಗಿ ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಇಸ್ರೇಲ್ ಯಾವಾಗಲೂ ಇರಾನ್ ಮೂಲದ ಸಂಘಟನೆಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದೆ, ಆದರೆ ಭಾರತವನ್ನು ಗುರಿಯಾಗಿಸಿರುವ ಪಾಕಿಸ್ತಾನಿ ಮೂಲದ ಭಯೋತ್ಪಾದನೆ ಬಗ್ಗೆ ಗಮನವಹಿಸುತ್ತಿಲ್ಲ ಎಂಬ ಟೀಕೆ ಭಾರತದ ಚಿಂತಕರಿಂದ ವ್ಯಕ್ತವಾಗಿತ್ತು. ಲಷ್ಕರ್ ಅನ್ನು ನಿಷೇಧಿಸಿರುವ ಇಸ್ರೇಲ್ ನಡೆ ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿರುವಂತಿದೆಯಲ್ಲದೇ, ಹಮಾಸ್ ಅನ್ನು ಸಹ ಭಾರತವು ಅಧಿಕೃತವಾಗಿಯೇ ಉಗ್ರ ಸಂಘಟನೆ ಎಂದು ಘೋಷಿಸಬೇಕು ಎಂಬ ಇಸ್ರೇಲಿನ ಒತ್ತಾಸೆಯೂ ಇಲ್ಲಿ ಕೆಲಸ ಮಾಡಿದಂತಿದೆ.

2008ರ ನವೆಂಬರ್‌ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಭಾರತಕ್ಕೆ ಬಂದಿದ್ದ ಎಲ್‌ಇಟಿ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. 60 ಗಂಟೆ ಕಾರ್ಯಾಚರಣೆ ನಡೆದಿತ್ತು. ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ, ಪೊಲೀಸರು ಸೇರಿ 166 ಜನರು ಮೃತಪಟ್ಟಿದ್ದರು. ಯಹೂದಿ ಕೇಂದ್ರವು ಈ ದಾಳಿಯ ವಿಶೇಷ ಗುರಿಯಾಗಿತ್ತು ಎಂಬುದಿಲ್ಲಿ ಸ್ಮರಣೀಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!