ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ತನ್ನ ಪತ್ನಿಯೊಂದಿಗೆ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ.
ಬಳಿಕ ಪ್ರತಿಕ್ರಿಯಿಸಿದ ಇಸ್ರೇಲ್ ರಾಯಭಾರಿ ರುವೆನ್ ಅಜರ್, ಯಾತ್ರಾರ್ಥಿಗಳು ಮತ್ತು ಆರಾಧಕರ ಭಕ್ತಿಯಿಂದ ನಾನು ಪುಳಕಿತನಾಗಿದ್ದೇನೆ. ಭಗವಾನ್ ರಾಮನ ಅಯೋಧ್ಯೆಯ ಭವ್ಯವಾದ ದೇವಾಲಯಕ್ಕೆ ಭೇಟಿ ನೀಡಿದ್ದು ಖುಷಿಯಾಗಿದೆ. ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಯಾತ್ರಿಕರು ಮತ್ತು ಆರಾಧಕರ ಭೇಟಿ ನೀಡಿದ್ದನ್ನು ಕಂಡು ಅಚ್ಚರಿಯಾಯಿತು ಎಂದು ಮಾತನಾಡಿದ್ದಾರೆ.
ಇಸ್ರೇಲ್ ಮತ್ತು ಭಾರತದ ಜನರು ಪ್ರಾಚೀನ ಸಂಸ್ಕೃತಿ ಉಳ್ಳವರು. ಅವರು ಪ್ರಾಚೀನ ಧರ್ಮ, ಸಂಪ್ರದಾಯ ಮತ್ತು ಪರಂಪರೆಯ ಶ್ರೀಮಂತಿಕೆ ಹೊಂದಿದ್ದಾರೆ. ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತೇವೆ. ನಿಮ್ಮ ಪರಂಪರೆಯ ಬಗ್ಗೆ ನೀವು ಹೆಮ್ಮೆಪಡುತ್ತೀರಿ. ನಾವು ಭಾರತದ ಸಂಸ್ಕೃತಿಯನ್ನು ಆಳವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮಮಂದಿರ ಭೇಟಿಗೂ ಮುನ್ನ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಇಸ್ರೇಲ್ ರಾಯಭಾರಿಯೊಂದಿಗೆ ಚರ್ಚೆ ನಡೆಸಿದ್ದರು.