ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಸೇನೆಯು ರಫಾ ನಗರದ ಒಳಗೆ ಪ್ರವೇಶಿಸಿದ್ದು, ಇತ್ತ ಸುಮಾರು 1,10,000 ಜನರು ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿರುವ ರಫಾ ನಗರವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ) ಶುಕ್ರವಾರ ತಿಳಿಸಿದೆ.
ಯುಎನ್ಆರ್ಡಬ್ಲ್ಯೂಎ ಅಂದಾಜಿನ ಪ್ರಕಾರ ಸುಮಾರು 1,10,000 ಜನರು ಈಗ ತಮ್ಮ ಜೀವ ಉಳಿಸಿಕೊಳ್ಳಲಲು ರಫಾದಿಂದ ಪಲಾಯನ ಮಾಡಿದ್ದಾರೆ. ಗಾಜಾ ಪಟ್ಟಿಯ ಯಾವ ಪ್ರದೇಶವೂ ಈಗ ಸುರಕ್ಷಿತವಾಗಿಲ್ಲ ಮತ್ತು ಜೀವನ ಪರಿಸ್ಥಿತಿಗಳು ಅತ್ಯಂತ ಕೆಟ್ಟದಾಗಿವೆ. ತಕ್ಷಣದ ಕದನವಿರಾಮವೊಂದೇ ಈಗ ನಮಗುಳಿದಿರುವ ಆಶಾಭಾವನೆಯಾಗಿದೆ ಎಂದು ಯುಎನ್ಆರ್ಡಬ್ಲ್ಯೂಎ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದೆ.
ಈಜಿಪ್ಟ್ನಿಂದ ರಫಾಗೆ ಮಾನವೀಯ ನೆರವು ಪರಿಹಾರ ಸಾಮಗ್ರಿಗಳ ಸಾಗಣೆಯನ್ನು ನಿಲ್ಲಿಸಲಾಗಿದೆ. ಗಾಜಾ ಪಟ್ಟಿಯ ಮಧ್ಯಭಾಗದಲ್ಲಿರುವ ರಫಾ ಮತ್ತು ಅಲ್ – ಸೈತುನ್ ನಗರದ ಪೂರ್ವದಲ್ಲಿ ಈಗಲೂ ಸೇನಾಪಡೆಗಳನ್ನು ನಿಯೋಜಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ರಫಾದಲ್ಲಿ ಸೈನ್ಯವು ಹಲವಾರು ಸುರಂಗ ಪ್ರವೇಶದ್ವಾರಗಳನ್ನು ಪತ್ತೆಹಚ್ಚಿದೆ. ಈಜಿಪ್ಟ್ಗೆ ರಾಫಾ ಕ್ರಾಸಿಂಗ್ನ ಪ್ಯಾಲೆಸ್ಟೈನ್ ಬದಿಯಲ್ಲಿ ನಡೆದ ಯುದ್ಧಗಳಲ್ಲಿ ಹಲವಾರು ಭಯೋತ್ಪಾದಕ ಕೋಶಗಳನ್ನು ನಿರ್ಮೂಲನೆ ಮಾಡಲಾಯಿತು ಎಂದು ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ಮೇಲೆ ರಾಕೆಟ್ಗಳು ಮತ್ತು ಮೋರ್ಟಾರ್ ಶೆಲ್ಗಳನ್ನು ಹಾರಿಸಿದ ರಫಾ ನಗರದ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್ ವಾಯುಪಡೆ ದಾಳಿ ನಡೆಸಿದೆ. ರಫಾದ ಪೂರ್ವ ಭಾಗದ ನಿವಾಸಿಗಳು ಈ ಪ್ರದೇಶವನ್ನು ತೊರೆಯುವಂತೆ ಸೋಮವಾರ ಇಸ್ರೇಲ್ ಮಿಲಿಟರಿ ಕರೆ ನೀಡಿತ್ತು.