ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದ ಖಾನ್ ಯೂನಿಸ್ ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ರಾಜಕೀಯ ನಾಯಕ ಸಲಾಹ್ ಅಲ್-ಬರ್ದವೀಲ್ ಸಾವನ್ನಪ್ಪಿದ್ದಾನೆ.
ದಾಳಿಯಲ್ಲಿ ಸಲಾಹ್ ಅಲ್-ಬರ್ದವೀಲ್ ಅವರ ಪತ್ನಿಯೂ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಪರ ಮಾಧ್ಯಮಗಳನ್ನು ಉಲ್ಲೇಖಿಸಿ ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಮಾತುಕತೆಗಳು ವಿಫಲವಾದ ನಂತರ, ಜನವರಿ 19 ರಿಂದ ಜಾರಿಯಲ್ಲಿದ್ದ ಕದನ ವಿರಾಮ ಮುರಿದ ನಂತರ ಈ ದಾಳಿ ನಡೆದಿದೆ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರಂತರವಾಗಿ ನಿರಾಕರಿಸುತ್ತಿದೆ ಮತ್ತು ಯುಎಸ್ ರಾಯಭಾರಿ ಸ್ಟೀವ್ ವಿಟ್ ಕಾಫ್ ಅವರು ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪಗಳನ್ನು ತಿರಸ್ಕರಿಸಿದೆ ಎಂದು ಹೇಳಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸರ್ಕಾರ, ಗಾಜಾದಲ್ಲಿ ಮತ್ತೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿರುವುದನ್ನು ಸಮರ್ಥಿಸಿಕೊಂಡಿದೆ.
ಗಾಜಾದಲ್ಲಿ ಮಿಲಿಟಿರಿ ಮತ್ತು ರಾಜಕೀಯ ಶಕ್ತಿಯಾಗಿ ಹಮಾಸ್ ಅನ್ನು ನಿರ್ನಾಮಗೊಳಿಸುವ ಉದ್ದೇಶದಿಂದ ಹಮಾಸ್ ವಿರುದ್ಧ ದಾಳಿಗಳನ್ನು ತೀವ್ರಗೊಳಿಸುವಂತೆ ಇಸ್ರೇಲ್ ರಕ್ಷಣಾ ಪಡೆಗಳಿಗೆ (ಐಡಿಎಫ್) ನಿರ್ದೇಶಿಸಲಾಗಿದೆ ಎಂದು ನೆತನ್ಯಾಹು ಅವರ ಕಚೇರಿ ಹೇಳಿದೆ.
ಇಸ್ರೇಲ್ ಹಮಾಸ್ ವಿರುದ್ಧ ಮತ್ತಷ್ಟು ಹೆಚ್ಚಿನ ಮಿಲಿಟರಿ ಬಲದಿಂದ ಕ್ರಮ ಕೈಗೊಳ್ಳಲಿದೆ. ಈ ಕಾರ್ಯಾಚರಣೆಯ ಯೋಜನೆಯನ್ನು ಐಡಿಎಫ್ ವಾರಾಂತ್ಯದಲ್ಲಿ ಪ್ರಸ್ತುತಪಡಿಸಿತ್ತು ಮತ್ತು ಅದನ್ನು ರಾಜಕೀಯ ನಾಯಕತ್ವ ಅನುಮೋದಿಸಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.