ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಭಾನುವಾರ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಮಾರೋಪ ದಿನದಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಹೊಸಬಾಳೆ, ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಯಾರಾದರೂ ಹಾಗೆ ಮಾಡಿದರೆ ಅದು ನಮ್ಮ ಸಂವಿಧಾನ ಶಿಲ್ಪಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಇನ್ನೂ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಮುಂದಾಗಿದ್ದ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಯತ್ನಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಳ್ಳಿಹಾಕಿವೆ. ಅಂತಹ ಮೀಸಲಾತಿ ಒದಗಿಸಲು ಇರುವ ನಿಬಂಧನೆಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ತಿಳಿಸಿದರು. ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ 17ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯ ವಿವಾದದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊಸಬಾಳೆ, ಸಮಾಜ ಮತ್ತು ರಾಷ್ಟ್ರದ ಒಳಿತಿಗಾಗಿ ಆದರ್ಶವಾಗಿರುವವರು ನಮ್ಮ ಆದರ್ಶಗಳಾಗಿರಬೇಕು. ಅಸಹಿಷ್ಣುತೆಗೆ ಹೆಸರಾಗಿರುವ ಮತ್ತು ಈ ರಾಷ್ಟ್ರದ ನೀತಿಗಳನ್ನು ಧಿಕ್ಕರಿಸಿದವರು ಆಗಿರಬಾರದು. ಮತೀಯ ದೃಷ್ಟಿಕೋನದಿಂದ ಅಲ್ಲ, ಔರಂಗಜೇಬನು ಈ ರಾಷ್ಟ್ರದ ಕುರಿತು ನಡೆದುಕೊಂಡ ರೀತಿಗಾಗಿ ವಿರೋಧ ವ್ಯಕ್ತವಾಗುತ್ತಿದೆ. 1947ರಲ್ಲಿ ನಾವು ರಾಜಕೀಯ ಸ್ವಾತಂತ್ರ್ಯ ಪಡೆದರೂ, ಮಾನಸಿಕ ಗುಲಾಮಗಿರಿಯು ಇಂದಿಗೂ ವಾಸ್ತವವಾಗಿದೆ ಮತ್ತು ಗುಲಾಮಗಿರಿ ಮಾನಸಿಕತೆಯಿಂದ ಮುಕ್ತ ಬಹಳ ಅಗತ್ಯವಾಗಿದೆ ಎಂದರು.
ಮಣಿಪುರದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಮಣಿಪುರದ ಸಮಸ್ಯೆಯನ್ನು ಪರಿಹರಿಸಲು ಮತ್ತು ಅಲ್ಲಿನ ಜನಜೀವನವು ಸಹಜವಾಗಿ ಮತ್ತು ಸಾಮರಸ್ಯದಿಂದ ಕೂಡಿರುವಂತೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾತ್ರ ಸಂಘವು ಸರ್ಕಾರಕ್ಕೆ ಹೇಳಿದೆ. ಸರ್ಕಾರವು ತನ್ನದೇ ಮೌಲ್ಯಾಂಕನದ ಆಧಾರದ ಮೇಲೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.