July 16, 2026
Thursday, July 16, 2026
spot_img

ISRO ಬ್ರೈನ್ ಡ್ರೈನ್: ತಜ್ಞರ ವಲಸೆ ತಡೆಯಲು ಕೇಂದ್ರದಿಂದ ‘ಮಹಾಸ್ತ್ರ’ ಪ್ರಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಹೆಮ್ಮೆಯ ‘ಗಗನಯಾನ’ ಯೋಜನೆ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಬೆನ್ನಲ್ಲೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಒಳಗೊಳಗೆ ಭಾರಿ ತಲ್ಲಣ ಸೃಷ್ಟಿಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು ನೂರಕ್ಕೂ ಅಧಿಕ ಅನುಭವಿ ಮತ್ತು ಹಿರಿಯ ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ದಿಢೀರ್ ಗುಡ್‌ಬೈ ಹೇಳಿರುವುದು ಸಂಸ್ಥೆಯನ್ನು ಚಿಂತೆಗೆ ದೂಡಿದೆ.

ನಿಯಮಗಳು ಕಠಿಣ: ಕೇಂದ್ರದ ಹೊಸ ಆದೇಶ

ತಜ್ಞರ ಈ ಹಠಾತ್ ವಲಸೆಯನ್ನು ತಡೆದು, ಪ್ರಮುಖ ಬಾಹ್ಯಾಕಾಶ ಯೋಜನೆಗಳಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಬಾಹ್ಯಾಕಾಶ ಇಲಾಖೆಯು (DoS) ಜುಲೈ 14 ರಂದು ಮಹತ್ವದ ಆಂತರಿಕ ಆದೇಶ ಹೊರಡಿಸಿದೆ. ವಿಜ್ಞಾನಿಗಳ ರಾಜೀನಾಮೆ ಹಾಗೂ ಸ್ವಯಂಪ್ರೇರಿತ ನಿವೃತ್ತಿ (VRS) ನಿಯಮಗಳನ್ನು ಇನ್ಮುಂದೆ ಅತ್ಯಂತ ಕಠಿಣಗೊಳಿಸಲಾಗಿದೆ.

ದೆಹಲಿ ಮಟ್ಟದಲ್ಲಿ ನಿರ್ಧಾರ: ಕೇಂದ್ರೀಕೃತ ವ್ಯವಸ್ಥೆ

ಇಷ್ಟು ದಿನ ಇಸ್ರೋದ ವಿವಿಧ ಕೇಂದ್ರಗಳ ನಿರ್ದೇಶಕರಿಗಿದ್ದ ರಾಜೀನಾಮೆ ಅಂಗೀಕಾರದ ಅಧಿಕಾರವನ್ನು ಹೊಸ ನಿಯಮದಡಿ ಹಿಂಪಡೆಯಲಾಗಿದೆ. ಗಗನಯಾನದಂತಹ ದೇಶದ ಗಂಭೀರ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ‘ಗ್ರೂಪ್ ಎ’ ದರ್ಜೆಯ ತಾಂತ್ರಿಕ ಮತ್ತು ವೈಜ್ಞಾನಿಕ ಸಿಬ್ಬಂದಿಯ ರಾಜೀನಾಮೆ ಪತ್ರಗಳನ್ನು ಇನ್ಮುಂದೆ ಸ್ಥಳೀಯವಾಗಿ ಒಪ್ಪುವಂತಿಲ್ಲ. ಇವುಗಳನ್ನು ನೇರವಾಗಿ ದೆಹಲಿಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಉನ್ನತ ಸಮಿತಿಯೇ ಪರಿಶೀಲಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಖಾಸಗಿ ಉದ್ಯಮದ ಪೈಪೋಟಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಒಬ್ಬೊಬ್ಬ ವಿಜ್ಞಾನಿಯ ಅನುಭವವೂ ವಿಶಿಷ್ಟವಾಗಿದ್ದು, ಅವರ ಸ್ಥಾನವನ್ನು ತಕ್ಷಣ ತುಂಬುವುದು ಅಸಾಧ್ಯ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಪ್ರಾಜೆಕ್ಟ್‌ಗಳು ತಡವಾಗುತ್ತಿರುವುದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಅಧಿಕೃತ ಕಾರಣ ಹೊರಬೀಳದಿದ್ದರೂ, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ನೀಡುತ್ತಿರುವ ಬಂಪರ್ ಆಫರ್‌ಗಳೇ ಈ ವಲಸೆಗೆ ಮುಖ್ಯ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !