ಹೊಸದಿಗಂತ ವರದಿ,ಹುಬ್ಬಳ್ಳಿ:
ಇಸ್ರೋ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಗ್ರಾಮೀಣ ಭಾಗದಲ್ಲಿ ಜನಿಸಿದವರು ಕೆಲಸ ಮಾಡುತ್ತಿರುವುದು ಬಹುದೊಡ್ಡ ಸಾಧನೆಯಾಗಿದೆ. ಅದರಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಅನೇಕರಿರುವುದು ಹೆಮ್ಮೆಯ ವಿಚಾರ ಎಂದು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಶನಿವಾರ ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜಿನ ಆವರಣದ ಬಯೋಟೆಕ್ ಸಭಾ ಭವನದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಎಲ್‌ಇ ಸಂಸ್ಥೆ ೧೦೭ ವರ್ಷದ ಇತಿಹಾಸ ಹೊಂದಿದೆ. ಇದರ ಸ್ಥಾಪನೆಗೆ ಕಾರಣಿಕರ್ತರಾದ ಸಪ್ತ ಋಷಿಗಳು ಹಾಗೂ ದಾನಿಗಳ ಯಾವತ್ತು ಮರೆಯಲು ಸಾಧ್ಯವಿಲ್ಲ. ಅವರ ಪ್ರಯತ್ನದಿಂದಲೇ ಕೆಎಲ್‌ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಈಗ ಇಸ್ರೋ ವಿಜ್ಞಾನಿಗಳನ್ನು ಸಂಸ್ಥೆ ಸನ್ಮಾನಿಸುತ್ತಿರುವುದು ಐತಿಹಾಸಿ ಸಮಾರಂಭ ವಾಗಿದೆ ಎಂದರು.
ಶಿಕ್ಷಣದಿಂದ ಸಮಾಜದ ಉದ್ಧಾರ ಸಾಧ್ಯ ಎಂದು ಮನಗಂಡ ಸಪ್ತ ಋಷಿಗಳು, ಕೇವಲ ಬೆರಳೇಣಿಕೆಯಷ್ಟು ಜನರಿಂದ ಕೆಎಲ್‌ಇ ಸಂಸ್ಥೆಯನ್ನು ಪ್ರಾರಂಭಿಸಿದರು. ಈಗ ಸಂಸ್ಥೆ ದೆಹಲಿ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಒಟ್ಟು ೩೦೦ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಶಿಕ್ಷಣದ ಜೊತೆಗೆ ಕಳೆದ ೨೫ ವರ್ಷದಿಂದ ಕೆಎಲ್‌ಇ ಸಂಸ್ಥೆ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.
ಬಾಹ್ಯಾಕಾಶ ಸಂಶೋಧನೆಯ ಉಪನ್ಯಾಸದಲ್ಲಿ ಇಸ್ರೋ ವಿಜ್ಞಾನಿ ಹನುಮಂತರಾಯ್ ಬಲೂರಗಿ ಮಾತನಾಡಿ, ಪ್ರತಿವರ್ಷ ಆಗಸ್ಟ್ ೨೩ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುತ್ತಿದೆ. ಚಂದ್ರಯಾನ-೩ ರ ಯಶಸ್ವಿ ಉಡಾವನೆಯ ನಂತರ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಹೆಚ್ಚಾಗಿದೆ ಎಂದರು.
ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳಾದ ದಿಲೀಪ್ ಲಕ್ಷ್ಮಣರಾವ್ ಶಿರೋಳ್ಕರ್, ಅಭಿಷೇಕ ದೇಶಪಾಂಡೆ, ಪ್ರಮೋದಾ ಹೆಗ್ಡೆ, ಮಲ್ಲಿಕಾರ್ಜುನ ಖಾನಾಪುರಿ, ಹನಮಂತರಾಯ್ ಬಳೂರಗಿ, ರಂಗನಾಥ ಯಕ್ಕುಂಡಿ, ಅಬ್ದುಲ್‌ರಹಮಾನ್ ಖಾನ, ಪ್ರಶಾಂತ ಎ.ಆರ್., ಕೆ.ಎಚ್.ನವಲಗುಂದ, ಶಾಂತಲಾ ಎಸ್.ಎಚ್., ಶ್ರೇಯಾಲಾ ರತ್ನಾಕರ, ಸಂಧ್ಯಾ ಕಾಮತ್, ಮಿಲಿಂದ್ ಉಂಡಾಲೆ, ಡಿ.ಆರ್.ಸುಬ್ರಹ್ಮಣ್ಯಂ, ಅನಿಲಕುಮಾರ ಎಂ., ರಾಮ್ ಕೆರೂರ ಹಾಗೂ ಮಹಮ್ಮದ್ ರಫೀಕ್ ಅವರನ್ನು ಸನ್ಮಾನಿಸಲಾಯಿತು.
ಕೆಎಎಲ್‌ಇ ತಾಂತ್ರಿಕ ವಿವಿ ಉಪಕುಲಪತಿ ಅಶೋಕ ಶೆಟ್ಟರ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಡಾ.ಬಸವರಾಜ ಅನಾಮಿ ಸೇರಿದಂತೆ ಅನೇಕರಿದ್ದರು.