ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಐಟಿ ವಿಚಾರಣೆ ಮುಗಿಸಿ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್ ಹೊರಗೆ ಬಂದಿದ್ದಾರೆ.
ಬಳಿಕ ಮಾತನಾಡಿದ ಅವರು, ವಿಚಾರಣೆ ವೇಳೆ ಅಧಿಕಾರಿಗಳು ಕೇಳಿದ ದಾಖಲೆ ಒದಗಿಸಿದ್ದೇನೆ ಎಂದು ಹೇಳಿದರು.
ಮನೆಯಲ್ಲಿ ಪತ್ತೆಯಾದ ಹಣ ಜಮೀನಿಗೆ ಸಂಬಂಧಿಸಿದ್ದು. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಸ್ನೇಹಿತ ಪ್ರಮೋದ್ಗೂ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 21ರಂದು ಪ್ರಮೋದ್ ಸಹ ವಿಚಾರಣೆಗೆ ಬರ್ತಾರೆ. ಐಟಿ ದಾಳಿ ವೇಳೆ ಮನೆಯಲ್ಲಿ 20 ಕೋಟಿ 2 ಲಕ್ಷ ರೂ. ಹಣ ಸಿಕ್ಕಿದೆ ಅಕ್ಟೋಬರ್ 26ರಂದು ನನಗೆ ಮತ್ತೆ ವಿಚಾರಣೆಗೆ ಬರಲು ಸೂಚಿಸಿದ್ದಾರೆ ಎಂದು ಪ್ರದೀಪ್ ತಿಳಿಸಿದರು.
ಗುತ್ತಿಗೆದಾರ ಅಂಬಿಕಾಪತಿ ನಿವಾಸದ ಮೇಲೆ ಅಕ್ಟೋಬರ್ 14ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ ನಿವಾಸದಲ್ಲಿ ಸುಮಾರು 42 ಗಂಟೆ ಕಾಲ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಇದೇ ವೇಳೆ, ಬರೋಬ್ಬರಿ 40 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಸಿಕ್ಕಿದೆ ಎನ್ನಲಾಗಿತ್ತು. ಇಷ್ಟೇ ಅಲ್ಲದೆ, ಆಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿದ್ದವು.