ಐಟಿ ಉದ್ಯೋಗಿ ಅತ್ಯಾಚಾರ ಪ್ರಕರಣ: ಕ್ಯಾಬ್‌ ಡ್ರೈವರ್‌ಗೆ 30 ವರ್ಷ ಜೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯವನ್ನು ಬೆಚ್ಚಿಬೀಳಿಸಿದ 2005ರ ಐಟಿಯ ಉದ್ಯೋಗಿಯ ಅತ್ಯಾಚಾರ ಮತ್ತು ಕೊಲೆ (Rape and murder) ಪ್ರಕರಣದಲ್ಲಿ ಆರೋಪಿಗೆ ಸುಪ್ರೀಂಕೋರ್ಟ್‌ 30 ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸಿದೆ.

ಆರೋಪಿ ಶಿವಕುಮಾರ್‌ ಎಂಬಾತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ ಕೋರ್ಟ್‌ 30 ವರ್ಷಗಳ ಕಾಲ ಜೈಲಿನಿಂದ ಹೊರಗೆ ಬಿಡಬಾರದು ಎಂಬ ಷರತ್ತು ವಿಧಿಸಿದೆ.

2005ರ ಡಿಸೆಂಬರ್‌ 13ರಂದು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟೆಕ್ಕಿ ಪ್ರತಿಭಾ ಅವರ ಮೇಲೆ ಕ್ಯಾಬ್‌ ಚಾಲಕ ಶಿವಕುಮಾರ್‌ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಈ ಯುವತಿ ರಾತ್ರಿ ಪಾಳಿ ಮುಗಿಸಿ ಕಂಪನಿ ಸೂಚಿಸಿದ ಕ್ಯಾಬ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಚಾಲಕ ಶಿವಕುಮಾರ್‌ ಆಕೆಯ ಮೇಲೆ ಕ್ರೂರವಾಗಿ ಎರಗಿದ್ದ. ಆಕೆಯ ಕೊರಳನ್ನು ಸೀಳಿ ಕೊಲೆ ಮಾಡಿದ್ದನು.

ಈ ಘಟನೆ ಆಐಟಿ ಲೋಕದಲ್ಲಿ ಯುವತಿಯರ ರಕ್ಷಣೆಗೆ ಸಂಬಂಧಿಸಿ ದೊಡ್ಡ ಪ್ರಶ್ನೆಗಳನ್ನು ಎತ್ತಿತ್ತು. ಮತ್ತು ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಉದ್ಯೋಗಸ್ಥ ಮಹಿಳೆಯರ ರಕ್ಷಣೆ ಮತ್ತು ಅವರನ್ನು ಉದ್ಯೋಗ ಸ್ಥಳದಿಂದ ಬಿಟ್ಟು ಬರುವ, ಕರೆದುಕೊಂಡು ಬರುವ ಕ್ಯಾಬ್‌ ವ್ಯವಸ್ಥೆಗೆ ಕಠಿಣ ನಿಯಮಗಳನ್ನು ಮಾಡಿ ಹೊಸ ನೀತಿಯನ್ನೇ ಜಾರಿಗೊಳಿಸಿತ್ತು.

2010ರಲ್ಲಿ ನ್ಯಾಯಾಲಯ ಆರೋಪಿ ಶಿವಕುಮಾರ್‌ಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ರಾಜ್ಯ ಸರ್ಕಾರ ಆತನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಸಲ್ಲಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್‌ 2016ರಲ್ಲಿ ತಾನು ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದ ಪ್ರಕರಣದಲ್ಲಿ ಈಗ ತೀರ್ಪು ಬಂದಿದೆ.

ಸುಪ್ರೀಂಕೋರ್ಟ್‌ ಹೇಳಿದ್ದೇನು?
ನ್ಯಾಯಮೂರ್ತಿಗಳಾದ ಅಭಯ್‌ ಎಸ್‌ ಓಕಾ ಮತ್ತು ರಾಜೇಶ್‌ ಬಿಂದಾಲ್‌ ಅವರನ್ನೊಳಗೊಂಡ ಪೀಠ ಮೇಲ್ಮನವಿಗಳ ವಿಚಾರಣೆ ನಡೆಸಿದ ಕೋರ್ಟ್‌ 30 ವರ್ಷದವರೆಗೂ ಆತನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಸೂಚಿಸಿದೆ.

ಅಪರಾಧಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದೊಂದೇ ಪ್ರಕರಣವೊಂದು ಅಪರೂಪದಲ್ಲೇ ಅಪರೂಪ ಎಂಬುದನ್ನು ನಿರ್ಧರಿಸುವ ಮಾನದಂಡವಾಗದು. ಇದು ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಆರೋಪಿಯ ಸ್ವಭಾವದಲ್ಲಿ ಸುಧಾರಣೆಯಾಗಿದೆ ಎಂಬ ಕಾರಣಕ್ಕೆ ಇಂತಹ ಕ್ರೂರ ಪ್ರಕರಣದಲ್ಲಿ ಅನುಚಿತ ಮೃದುತ್ವ ತೋರುವುದು ಕಾನೂನು ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಂತ್ರಸ್ತೆಯ ಹಕ್ಕುಗಳನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಹೇಳಿದೆ.

ಹೇಯ ಪ್ರಕರಣದಲ್ಲಿ ಮರಣದಂಡನೆ ವಿಧಿಸುವಂತೆ ಮಾಡುವ ಯತ್ನದಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಆರೋಪಿಯು ಕನಿಷ್ಠ 30 ವರ್ಷಗಳ ಜೀವಾವಧಿ ಸೆರೆವಾಸ ಪೂರ್ಣಗೊಳಿಸುವವರೆಗೆ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂಬ ವಿಶೇಷ ಮಾರ್ಪಾಡುಗೊಂಡ ಶಿಕ್ಷೆ ವಿಧಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!