ದೇಶಕ್ಕೆ ಪ್ರಶಸ್ತಿಗಳನ್ನು ತಂದಿರುವುದು ಹೆಮ್ಮೆಯ ಸಂಗತಿ: ಕಾಮನ್‌ವೆಲ್ತ್ ಸಾಧಕರಿಗೆ ಪ್ರಧಾನಿ ಮೋದಿ ಶಹಬ್ಬಾಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ ನಮ್ಮ ಕ್ರೀಡಾಪಟುಗಳು ನಮ್ಮ ದೇಶಕ್ಕೆ ಪ್ರಶಸ್ತಿಗಳನ್ನು ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಮಾತನಾಡಿದ ಅವರು, ರಾಷ್ಟ್ರವು ಕ್ರೀಡಾ ಕ್ಷೇತ್ರದಲ್ಲಿ ಎರಡು ಪ್ರಮುಖ ಸಾಧನೆಗಳನ್ನು ದಾಖಲಿಸಿದ್ದು, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿರುವುದರ ಜೊತೆಗೆ ದೇಶ ಮೊದಲ ಬಾರಿಗೆ ಚೆಸ್​ ಒಲಿಂಪಿಯಾಡ್​ ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ ಎಂದು ಹೇಳಿದರು.

ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದರೂ ನಿಮ್ಮ ಯಶಸ್ಸು ಒಟ್ಟಿಗೆ ಆಚರಿಸುವುದಾಗಿ ಕಾಮನ್​ವೆಲ್ತ್​ ಕ್ರೀಡಾಕೂಟ ಪ್ರಾರಂಭಗೊಳ್ಳುವ ಮೊದಲು ಭರವಸೆ ನೀಡಿದ್ದೆ. ನೀವು ಯಶಸ್ಸುಗಳೊಂದಿಗೆ ಹಿಂದಿರುಗುತ್ತೀರಿ ಎಂದು ನನಗೆ ವಿಶ್ವಾಸವಿತ್ತು. ನಾವು ಜೊತೆಯಾಗಿ ವಿಜಯೋತ್ಸವ ಆಚರಿಸುತ್ತೇವೆ ಎಂಬ ನಂಬಿಕೆ ಇತ್ತು ಎಂದು ನುಡಿದರು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಾಲ್ಕು ಹೊಸ ಕ್ರೀಡೆಗಳಲ್ಲಿ ಗೆಲುವಿನ ಹಾದಿ ತುಳಿದಿದ್ದೇವೆ. ಲಾನ್ ಬಾಲ್‌ನಿಂದ ಅಥ್ಲೆಟಿಕ್ಸ್‌ವರೆಗೆ ಅಭೂತಪೂರ್ವ ಪ್ರದರ್ಶನವನ್ನು ನಮ್ಮವರು ನೀಡಿದ್ದಾರೆ. ಇದರಿಂದಾಗಿ ಯುವಕರಲ್ಲಿ ಹೊಸ ಕ್ರೀಡೆಗಳತ್ತ ಆಸಕ್ತಿ ಹೆಚ್ಚಾಗಲಿದೆ. ಈ ಹೊಸ ಕ್ರೀಡೆಗಳಲ್ಲಿ ನಾವು ನಮ್ಮ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!