- ಮೇಘನಾ ಶೆಟ್ಟಿ, ಶಿವಮೊಗ್ಗ
ಆಫೀಸಿನಲ್ಲಿ ಕೆಲಸಮಾಡುತ್ತಿದ್ದ ಕರಣ್ಗೆ ಅಮ್ಮು ಶಾಲೆಯಿಂದ ಕರೆ ಬಂತು. ಮಗಳಿಗೆ ಏನಾಯ್ತು ಎಂದು ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಕರೆ ರಿಸೀವ್ ಮಾಡಿ ಆತಂಕದಲ್ಲಿಯೇ ಹಲೋ ಗುಡ್ ಮಾರ್ನಿಂಗ್ ಮ್ಯಾಮ್ ಹೇಳಿ ಅಂದ. ಹಲೋ ಮಿಸ್ಟರ್ ಕರಣ್, ಬೆಳಗ್ಗೆಯೇ ಕರೆ ಮಾಡಿದ್ದಕ್ಕಾಗಿ ಕ್ಷಮೆ ಇರಲಿ. ನಿಮ್ಮ ಮಗಳು ಅಮೃತಾ ತರಗತಿಯ ಹುಡುಗನೊಬ್ಬನಿಗೆ ಕಚ್ಚಿದ್ದಾಳೆ. ಆತನ ಪೋಷಕರು ಶಾಲೆಗೆ ಬಂದಿದ್ದಾರೆ. ನೀವೂ ಬನ್ನಿ ಎಂದು ಹೇಳಿದರು. ಕರಣ್ಗೆ ಶಾಕ್ ಆದರೂ, ಹೌದಾ ಮ್ಯಾಮ್ ಅಮ್ಮು ಹಾಗೆ ಮಾಡೋ ಹುಡುಗಿ ಅಲ್ಲ, ಈಗಲೇ ಬರುತ್ತೇನೆ ಎಂದು ಹೊರಟ.
ಅಮ್ಮು ತುಂಬಾ ಶಾಂತ ಸ್ವಭಾವದ ಹುಡುಗಿ, ತನ್ನ ಓದು, ತನ್ನ ಡ್ಯಾನ್ಸ್, ಪುಸ್ತಕ ಇಷ್ಟೇ ಅವಳ ಪ್ರಪಂಚ. ಆದರೆ ಹೊಸ ಶಾಲೆಗೆ ಸೇರಿದಾಗಿನಿಂದ ಅಮ್ಮು ಮಾತು, ನಡವಳಿಕೆ ಬದಲಾಗಿ ಹೋಗಿದೆ. ಪುಸ್ತಕದ ಬೈಂಡ್ ಕೂಡ ಐರನ್ ಮಾಡಿದಂತೆ ಇಟ್ಟುಕೊಳ್ತಿದ್ದ ಅಮ್ಮು ಈಗ ಪುಸ್ತಕ ಹರಿದುಹೋಗಿದ್ದರೂ ಕ್ಯಾರೆ ಅನ್ನುತ್ತಿಲ್ಲ. ಡ್ಯಾನ್ಸ್ ಕ್ಲಾಸ್ನಿಂದ ಬಂದು ಗೆಜ್ಜೆಯನ್ನು ದೇವರ ಸಾಮಾಗ್ರಿಯೇನೋ ಎಂಬಂತೆ ನಾಜೂಕಾಗಿ ಇಡುತ್ತಿದ್ದ ಅಮ್ಮು, ಈಗ ಅದೇ ಗೆಜ್ಜೆಯನ್ನು ಟೇಬಲ್ ಮೇಲೆ ಎಸೆಯುತ್ತಿದ್ದಾಳೆ. ಇದಕ್ಕೆಲ್ಲಾ ಸಹವಾಸ ದೋಷವೇ ಕಾರಣ. ಶಾಲೆಯ ವಾತಾವರಣ ಅವಳನ್ನು ಹಾಳು ಮಾಡುತ್ತಿದೆ ಎಂದುಕೊಂಡ.
ಶಾಲೆಗೆ ಹೋದ ನಂತರ ಅಮ್ಮು ಜೊತೆಗೆ ಎರಡು ನಿಮಿಷ ಮಾತನಾಡುತ್ತೇನೆ ಎಂದು ಅವಳನ್ನು ಪ್ರಿನ್ಸಿಪಲ್ ಆಫೀಸ್ನಿಂದ ಹೊರಕ್ಕೆ ಕರೆದುಕೊಂಡು ಬಂದ. ಅಮ್ಮು ಕಣ್ಣಲ್ಲಿ ಕಣ್ಣಿಟ್ಟು, ನೀನು ಆ ಮುಗೂಗೆ ಕಚ್ಚಿದ್ಯಾ? ಎಂದು ಪ್ರಶ್ನಿಸಿದ. ಅಮ್ಮು ಕುತ್ತಿಗೆ ಆಡಿಸಿ ಹೌದು ಎಂದಳು. ಇದನ್ನು ಕರಣ್ಗೆ ಜೀರ್ಣಮಾಡಿಕೊಳ್ಳೋಕೆ ಆಗಲಿಲ್ಲ. ಆದರೂ ಯಾಕೆ ಎನ್ನುವ ಪ್ರಶ್ನೆ ಎದುರಿಗಿಟ್ಟ. ನಿಂಗೆ ಅವನನ್ನು ಕಚ್ಚುವಷ್ಟು ಧೈರ್ಯ ಇಲ್ಲ, ಕಚ್ಚಿದ್ರೆ ಬೆಟ್ಸ್ ಗೆಲ್ಲುತ್ತೀಯ, ಸಂಜೆ ಐಸ್ ಕ್ಯಾಂಡಿ ಕೂಡ ಕೊಡಿಸುತ್ತೇನೆ ಎಂದು ಸಹನ ಹೇಳಿದ್ಲು ಎಂದಳು.
ಕಚ್ಚಿದ ಅಮ್ಮುವನ್ನು ಬೈಯೋದಾ?
ಕಚ್ಚೋಕೆ ಹೇಳಿದ ಸಹನಾಳನ್ನು ಬೈಯೋದಾ?
ಸ್ನೇಹಿತರು ಹೇಳಿದ್ದೆಲ್ಲಾ ಮಾಡಬೇಕಿಲ್ಲ ಎಂದು ಹೇಳಿಕೊಡದ ಪೋಷಕರನ್ನು ಬೈಯೋದಾ?
ಮಕ್ಕಳು ದೊಡ್ಡವರಾಗುತ್ತಾ ಪೋಷಕರಿಗಿಂತ ಹೆಚ್ಚು ಸ್ನೇಹಿತರನ್ನು ಪ್ರೀತಿಸುತ್ತಾರೆ. ಅವರ ಜೊತೆ ಕಳೆಯುವ ಅರ್ಧ ಗಂಟೆ ಸಮಯಕ್ಕಾಗಿ ಹಾತೊರೆಯುತ್ತಾರೆ. ಅವರು ಮಾತಾಡುವಂತೆಯೇ ಮಾತನಾಡಲು, ಅವರ ಹಾವ ಭಾವವನ್ನು ಕಾಪಿ ಮಾಡಲು ಇಷ್ಟಪಡುತ್ತಾರೆ. ಸುಲಭವಾಗಿ ಹೇಳ್ಬೇಕು ಅಂದರೆ ಇನ್ಸ್ಟಾಗ್ರಾಮ್ ನಿಮಗೆ ಏನು ಮಾಡುತ್ತದೋ, ಮಕ್ಕಳಿಗೆ ಸ್ನೇಹಿತರು ಅದನ್ನೇ ಮಾಡುತ್ತಾರೆ. ಇನ್ಫ್ಲೂಯೆನ್ಸ್! ಹೌದು, ಗೊತ್ತಿಲ್ಲದೇ ಮಕ್ಕಳು ಸ್ನೇಹಿತರಿಂದ ಪ್ರಭಾವಕ್ಕೊಳಗಾಗುತ್ತಾರೆ. ಯಾವುದು ಸರಿ ಅಥವಾ ತಪ್ಪು ಎಂದು ತಿಳಿದುಕೊಳ್ಳದೇ ಮುಂದುವರಿಯುತ್ತಾರೆ. ಮಕ್ಕಳ ಸ್ನೇಹಿತರನ್ನು ನೀವು ಕಂಟ್ರೋಲ್ ಮಾಡೋದಕ್ಕೆ ಆಗೋದಿಲ್ಲ. ಆದರೆ ಮಕ್ಕಳು ಅವರಿಂದ ಕೆಟ್ಟ ವಿಷಯಗಳಲ್ಲಿ ಪ್ರಭಾವಿತರಾಗುವುದನ್ನು ತಪ್ಪಿಸಬಹುದು.
ಹೇಗೆ?
ರಿಜೆಕ್ಷನ್
ಮಕ್ಕಳಿಗೆ ರಿಜೆಕ್ಷನ್ ಕಲಿಸಿ. ನಿನ್ನ ಜೊತೆ ಆಟಾಡೋದಿಲ್ಲ ಎಂದು ಬೇರೆ ಮಕ್ಕಳು ನಿಮ್ಮ ಮಗುವಿಗೆ ಹೇಳಿದಾಗ ಅದನ್ನು ಹ್ಯಾಂಡಲ್ ಮಾಡೋದನ್ನು ಕಲಿಸಿ. ನೋವಾಗುತ್ತದೆ. ಆದರೆ ಮಕ್ಕಳು ನಿನ್ನ ಜೊತೆ ಆಡೋದಿಲ್ಲ ಎಂದರೆ ನಿನ್ನಲ್ಲಿ ಏನೋ ತೊಂದರೆ ಇದೆ ಎಂದು ಅರ್ಥ ಅಲ್ಲ. ನಿನ್ನ ಜೊತೆ ಆಡೋಕೆ ಇಷ್ಟಪಡುವ ಸ್ನೇಹಿತರಿದ್ದಾರೆ. ಅವರ ಜೊತೆ ಸಮಯ ಕಳೆಯಬಹುದು ಎಂದು ಹೇಳಿಕೊಡಿ.

ಬೌಂಡರಿ
ಮಕ್ಕಳಿಗೆ ʼನಾನು ಮಾಡೋದಿಲ್ಲ, ನನಗೆ ಇಷ್ಟ ಇಲ್ಲ, ಇದು ತಪ್ಪುʼ ಎಂದು ಹೇಳುವ ಸ್ವಾತಂತ್ರ್ಯ ಇರಲಿ. ನೀನು ನನ್ನ ಫ್ರೆಂಡ್ ಎಂದರೆ ನನ್ನ ಹೋಮ್ ವರ್ಕ್ ಬರೆದುಕೊಡು ಎಂದು ಸ್ನೇಹಿತ ಹೇಳಿದಾಗ ಇಲ್ಲ ಇದು ನನ್ನ ಕೆಲಸ ಅಲ್ಲ. ಮಾಡೋದಿಲ್ಲ ಎಂದು ಹೇಳುವಷ್ಟು ಬುದ್ಧಿ ನಿಮ್ಮ ಮಕ್ಕಳಿಗೆ ಇರಲಿ.
ಪ್ರೀತಿ
ಯಾವುದೇ ಮಗು ಒಂಟಿಯಾಗಿ ಕುಳಿತರೆ ಆ ಮಗುವಿನ ಪಕ್ಕ ಹೋಗಿ ಕೂರಲು ನಿಮ್ಮ ಮಗುವಿಗೆ ಹೇಳಿಕೊಡಿ. ಒಬ್ಬಂಟಿಯಾಗಿರುವವರನ್ನು ಕರೆದುಕೊಂಡು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಲು ಹೇಳಿಕೊಡಿ. ಶಾಲೆಗೆ ಹೊಸತಾಗಿ ಬಂದಿರುವ ವಿದ್ಯಾರ್ಥಿಯೊಬ್ಬ ಒಂಟಿಯಾಗಿ ಕುಳಿತು ಊಟ ಮಾಡುತ್ತಿದ್ದರೆ, ನಿಮ್ಮ ಮಗುವೇ ಹೋಗಿ ನಾನಿಲ್ಲಿ ಕೂರಬಹುದಾ? ಎಂದು ಕೇಳುವಂತಿರಲಿ.
ಎಂಪತಿ
ಮಕ್ಕಳಲ್ಲಿ ಭಾವನೆಗಳನ್ನು ಬೆಳೆಸಿ. ಯಾವುದೇ ಮಗುವಿನ ಮನಸ್ಸಿಗೆ ನೋವಾಗುವಂತಹ ತಮಾಷೆ, ತಮಾಷೆಯೇ ಅಲ್ಲ. ಉದಾಹರಣೆಗೆ ನಡೆಯುತ್ತಾ ಒಂದು ಮಗು ಕೆಳಕ್ಕೆ ಬಿದ್ದಿತು ಎಂದುಕೊಳ್ಳಿ. ಆಗ ನಿಮ್ಮ ಮಗು ಏನು ಮಾಡುತ್ತದೆ? ಇತರರ ಜೊತೆ ಸೇರಿ ನಗುತ್ತದೆಯೋ ಅಥವಾ ಹೋಗಿ ಆ ಮಗು ಎದ್ದೇಳಲು ಸಹಾಯ ಮಾಡುತ್ತದೆಯೋ? ಇದನ್ನು ಕಲಿಸಿಕೊಡಿ. ಎಲ್ಲರೂ ಮಾಡ್ತಿದ್ದಾರೆ ಎಂದ ಮಾತ್ರಕ್ಕೆ ಮಾಡಬೇಕು ಎಂದಿಲ್ಲ. ಯಾವುದು ಸರಿಯೋ ಅದನ್ನು ಮಾಡಿದರೆ ಸಾಕು ಎಂದು ತಿಳಿಸಿ. ಮಕ್ಕಳು ಮನೆಗೆ ಬಂದು ಪೋಷಕರಿಗೆ ಪ್ರತಿಯೊಂದನ್ನು ಹೇಳುವಷ್ಟು ಸ್ಪೇಸ್ ಇರಲಿ. ಶಾಲೆಯಲ್ಲಿ ಯಾರೇ ಮನಸ್ಸನ್ನು ನೋಯಿಸಲಿ ಮನೆಯಲ್ಲಿ ನನ್ನವರಿದ್ದಾರೆ ಎನ್ನುವ ಭಾವನೆ ಇರಲಿ.

ದೈಹಿಕ ಹಿಂಸೆ
ಯಾವುದೇ ಮಕ್ಕಳಿಗೆ ಹೊಡೆಯುವುದು ಅಥವಾ ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಆಡುವುದು ತಪ್ಪು ಎಂದು ಹೇಳಿಕೊಡಿ. ಯಾರೇ ನಿಮ್ಮ ಮಕ್ಕಳಿಗೆ ಹೊಡೆಯುವುದು ಅಥವಾ ಬೈಯಲು ಬಂದರೆ ಜೋರಾಗಿ ನನಗೆ ಹೊಡೆಯಬೇಡಿ ನಿಲ್ಲಿಸಿ ಎಂದು ಕೂಗಲು ಹೇಳಿ. ಇಲ್ಲವೇ ಆ ಜಾಗದಿಂದ ಹೋಗಲು ಹೇಳಿಕೊಡಿ. ತಕ್ಷಣ ಯಾವುದೇ ಟೀಚರ್ ಅಥವಾ ಬೇರೆ ಸ್ಥಳಗಳಲ್ಲಿ ದೊಡ್ಡವರಿಗೆ ವಿಷಯ ಮುಟ್ಟಿಸುವಂತೆ ಹೇಳಿಕೊಡಿ. ಯಾರದ್ದು ತಪ್ಪು ಎಂದು ಜಡ್ಜ್ ಮಾಡುವಷ್ಟು ಬುದ್ಧಿವಂತರಾಗಿರಲಿ.
ಸೆಲ್ಫ್ ಕೇರ್
ಮಕ್ಕಳಿಗೆ ತಮ್ಮನ್ನು ತಾವು ಪ್ರೀತಿಸಬೇಕು ಎನ್ನುವುದನ್ನು ಹೇಳಿಕೊಡಿ. ಯಾರೇ ಮಕ್ಕಳ ಬಗ್ಗೆ ಏನು ಹೇಳಿದರೂ ಅದು ನನಗಲ್ಲ ಎಂದು ಮಕ್ಕಳು ಹೇಳಿಕೊಳ್ಳಬೇಕು. ನನಗೆ ಇಷ್ಟವಿಲ್ಲದವರು ನನ್ನ ಬಗ್ಗೆ ಮಾತನಾಡುವುದನ್ನು ತಲೆಗೆ ಹಚ್ಚಿಕೊಳ್ಳಬೇಕಿಲ್ಲ ಎಂದು ಹೇಳಿಕೊಡಿ. ತಪ್ಪು ಮಾಡಿದರೆ ಮನುಷ್ಯ ಕೆಟ್ಟವನಾಗುವುದಿಲ್ಲ. ಮಾಡಿದ ತಪ್ಪಿನ ಅರಿವೇ ಇಲ್ಲದೇ ಮತ್ತೆ ಮತ್ತೆ ಅದನ್ನೇ ಮಾಡಿದಾಗ ಮಾತ್ರ ಕೆಟ್ಟವರೆಂದು ಹೇಳಬಹುದು ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ.



