ನಮ್ಮವರೇ ನನ್ನ ವಿರುದ್ಧ ಕುತಂತ್ರ ಮಾಡುವುದು ಸರಿಯಲ್ಲ: ಶಿವಾನಂದ ಪಾಟೀಲ್

ಹೊಸದಿಗಂತ ವರದಿ, ವಿಜಯಪುರ:

ವಿಧಾನಸಭಾ ಚುನಾವಣೆ ಸಂದರ್ಭ ನನ್ನ ವಿರುದ್ಧ ನಮ್ಮವರೇ ಕುತಂತ್ರ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಇಡೀ ಜಿಲ್ಲೆಯಲ್ಲಿ ನನ್ನ ಅಭಿಮಾನಿಗಳು ಇದ್ದಾರೆ, ಅವರೂ ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶಿವಾನಂದ ಪಾಟೀಲ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಕಡಿಮೆ ಇದ್ದರೂ ವಿಶೇಷವಾಗಿ ಟಾರ್ಗೆಟ್ ಮಾಡಿ, ಎಐಎಂಐಎಂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಮೌಲಾನಾ ಒಬ್ಬರು ಇದರ ಹಿಂದೆ ಇದ್ದಾರೆ. ನಮ್ಮ ಪಕ್ಷದವರು ಅವರ ಹಿಂದೆ ಇದ್ದಾರೆ ಎಂದು ಭಾಸವಾಗುತ್ತಿದ್ದು, ಚುನಾವಣೆ ನಂತರ ಎಲ್ಲವನ್ನೂ ಬಹಿರಂಗಪಡಿಸುವೆ ಎಂದರು.

ಮುಸ್ಲಿಂ ಮತದಾರರಿರುವ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿ ಕಣಕ್ಕಿಳಿಸಿಲ್ಲ, ಆದರೆ ಬಸವನಬಾಗೇವಾಡಿ ಕ್ಷೇತ್ರವನ್ನು ಟಾರ್ಗೆಟ್ ಮಾಡಿ, ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ನಮ್ಮವರೇ ಒಬ್ಬರು ಸೇರಿದಂತೆ ವಿಜಯಪುರದ ಮೌಲಾನಾ ಒಬ್ಬರು ಅದರ ಹಿಂದೆ ಇದ್ದಾರೆ. ನನ್ನ ವಿರುದ್ಧ ವ್ಯವಸ್ಥಿತ ಹುನ್ನಾರ ನಡೆದಿದೆ. ಕುತಂತ್ರ ರಾಜಕಾರಣ ಏನೇ ನಡೆದರೂ ಜನತೆ ನನ್ನ ಕೈ ಬಿಡಲ್ಲ ಎಂಬುದು ಗೊತ್ತಿದೆ. ಈ ರೀತಿಯ ರಾಜಕಾರಣ ಕೊನೆಯಾಗಬೇಕು ಎಂದರು.

ನಾನು ಎಂದಿಗೂ ಕೆಲವು ವಿಚಾರಗಳನ್ನು ಹೇಳಿಲ್ಲ, ಇಷ್ಟು ದಿನ ಅಪಾರವಾಗಿ ಸಹಿಸಿಕೊಂಡಿರುವೆ, ನನ್ನ ಸಹನೆ ಬಲಹೀನತೆ ಅಲ್ಲ. ಇದೇ ರೀತಿ ಮುಂದುವರೆದರೆ ನನ್ನ ರಾಜಕಾರಣ ಸಹ ದೊಡ್ಡದಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ದೇವರು ಅವರಿಗೆ ಸದ್ಬುದ್ಧಿ ನೀಡಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!