Wednesday, December 7, 2022

Latest Posts

ಇನ್ನೊಬ್ಬರ ದುಃಖವನ್ನು ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಾಜದ ಪ್ರತಿಯೊಬ್ಬರಲ್ಲಿ ಡಾ.ವೀರೇಂದ್ರ ಹೆಗ್ಗಡೆಜೀಯವರಂತೆ ರಾಷ್ಟ್ರಹಿತದ, ಜನ ಹಿತದ ಚಿಂತನೆಯ ಮನೋಭಾವ ಬೆಳೆಯಬೇಕು ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ನಡೆದ 90 ನೇ ಸರ್ವಧರ್ಮ ಸಮ್ಮೇಳನವನ್ನು‌‌ ಉದ್ಘಾಟಿಸಿ ಮಾತನಾಡಿದರು‌.

ಇನ್ನೊಬ್ಬರ ದುಃಖವನ್ನು ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಅದರ ಬಗ್ಗೆ ಹೆಮ್ಮೆ, ಗರ್ವ ಪಡೆಯುವುದು ಸರ್ವಥಾ ಸಲ್ಲ. ದುಃಖಿತರ ಕಣ್ಣೊರೆಸುವುದು ಸೇವೆ ಎಂಬ ಮನೋಭಾವ ನಮ್ಮದಾಗಬೇಕು. ಇದಕ್ಕೆ ಸರಿಯಾದ ಉದಾಹರಣೆ ಹೆಗ್ಗಡೆಯವರು ಆಗಿದ್ದಾರೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ರಾಷ್ಟ್ರಹಿತ, ಜನ ಹಿತಕಾಯುವ ಚಿಂತನೆಯತ್ತ ಸಾಗಬೇಕೇ ಹೊರತು ಹಣಕ್ಕೆ‌ ಮಹತ್ವಕೊಟ್ಟು ಅದರಲ್ಲಿ‌ ವೈಭವತೆಯನ್ನು‌ ಕಾಣುವುದು ಸರಿಯಲ್ಲ ಎಂದು ವಿಶ್ಲೇಷಿಸಿದರು.

ಸಾತ್ವಿಕ ಜೀವನವೇ ಶಾಶ್ವತವಾದದ್ದು, ಕೇವಲ ಹಣದ ಓಡುವುದನ್ನು ನಿಲ್ಲಿಸಿ ಧರ್ಮದ ಜತೆ ನಡೆಯುವುದರ ಬಗ್ಗೆ ತನ್ನ ಚಿಂತನೆಯನ್ನು ತಿಳಿಸಿದರು.

ಕ್ಷೇತ್ರದ ಚತುರ್ದಾನ ಪರಂಪರೆಗಳನ್ನು ಶ್ಲಾಘಿಸಿದ ಅವರು ಈ ದಾನ ಪರಂಪರೆಯಲ್ಲಿ ಮಹಿಳೆಗೆ ಹೆಚ್ಚಿನ‌ ಪ್ರಾಮುಖ್ಯತೆಯನ್ನು‌ ನೀಡಲಾಗಿದೆ. ನಮ್ಮ ಜೀವನದಲ್ಲಿ ಅನ್ನ ನೀಡುವವಳು, ವಿದ್ಯೆ ನೀಡುವವಳು, ಲಕ್ಷ್ಮೀಯಾಗಿ ಕೈ ಹಿಡಿಯುವವಳು, ಔಷಧ ನೀಡುವವಳು ಸ್ತ್ರೀಯೇ ಆಗಿರುವುದು ವಿಶೇಷ. ಇದು ಕ್ಷೇತ್ರದ ಹಲವಾರು ಯೋಜನೆಗಳಲ್ಲಿಯೂ ಕಾಣಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಇಂದು ದಿವ್ಯವಾದ, ದೈವಿಕವಾದ ಕಾರ್ಯಕ್ರಮದ ಆಯೋಜನೆ ನಡೆದಿದೆ. ಭಗವಾನ್ ಶಂಕರನಿಗೆ ಸಮರ್ಪಿತವಾಗಿದೆ ಇಲ್ಲಿನ ವ್ಯವಸ್ಥೆ ಹೀಗಾಗಿ ನಾನು‌ ಚುನಾವಣಾ ಭೂಮಿಯನ್ನು‌ ಬಿಟ್ಟು, ಪೂಜನೀಯ ಭೂಮಿಗೆ ಬಂದಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ, ನ್ಯಾಯವಾದಿ ಎಂ.ಆರ್.ಸತ್ಯನಾರಾಯಣ ಅವರು, ಭಾರತದಲ್ಲಿ ನಾನಾ ಪ್ರಕಾರದ ರೀತಿಗಳು, ಸಂಸ್ಕೃತಿಗಳು, ಅನೇಕ ದೇವಾನುದೇವತೆಗಳಿದ್ದರೂ ಏಕತೆ ಇರುವುದನ್ನು ಅನೇಕ ಪ್ರಸಿದ್ದ ವಿದೇಶಿ ವಿದ್ವಾಂಸರು, ಲೇಖಕರು, ಸಂಶೋಧಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಸಾವಿರಾರು ವರ್ಷಗಳ ಹಿಂದೆ ಪ್ರಾಚೀನರು, ಕಲೆ, ವಿಜ್ಞಾನ, ನ್ಯಾಯ, ಗಣಿತ, ಆಧ್ಯಾತ್ಮಿಕ ಇತ್ಯಾದಿ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಮಕ್ಕಳಿಗೆ ತಿಳಿಸಿಕೊಡುವವರೇ ಇಲ್ಲವಾಗಿದ್ದಾರೆ ಹೀಗಾಗಿ ನಮ್ಮ ಮಕ್ಕಳಿಗೆ ಅಮೇರಿಕ, ಇಂಗ್ಲೇಂಡ್‌ಗಳೇ ಪ್ರಿಯವಾಗಿದೆ ಎಂದರು.

ಜ್ಞಾನ,ವಿಜ್ಞಾನಕ್ಕೆ ಯಾವುದೇ ಗಡಿ, ಮತಗಳಿಲ್ಲಾ ಎಂಬುದನ್ನು ಪ್ರಾಚೀನರು ತೋರಿಸಿಕೊಟ್ಟಿರುವ ಉದಾಹರಣೆಗಳಿವೆ. ನಮ್ಮ ಸಂಸ್ಕೃತಿ, ನಾಗರಿಕತೆ, ಪ್ರಾಚೀನತೆಯ ತಿಳುವಳಿಕೆ ಇಲ್ಲದಿರುವುದೇ ಹಿಂದೂ ಧರ್ಮ ಕುಸಿಯಲು‌ ಕಾರಣ ಎಂದ ಅವರು ಸಾಧಕರಾಗಿ ಬದುಕನ್ನು ಬಾಳಿದವರ ಋಣ ನಮ್ಮ ಮೇಲಿದೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು ಎಂದರು.

ಸ್ವಾಗತಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ‌ ಹೆಗ್ಗಡೆ ಅವರು, ನಮ್ಮ ಬದುಕಿಗೆ ಬೆಳಕನ್ನು‌‌ ನೀಡಿ ದಾರಿ ತೋರಿಸುವ ಸಾಧನವನ್ನು ಧರ್ಮ ಎಂದು‌ ಕರೆಯುತ್ತಾರೆ. ಜ್ಞಾನ ಸಂಗ್ರಹವು ಬಾಲ್ಯದಲ್ಲಿ ಪೋಷಕರಿಂದಲೂ, ಗುರು ಹಿರಿಯರಿಂದಲೂ, ಧಾರ್ಮಿಕ ಶ್ರದ್ಧಾಕೇಂದ್ರಗಳಿಂದಲೂ, ಆದರ್ಶ ಗ್ರಂಥಗಳಿಂದಲೂ, ಮಹಾತ್ಮರ ನಡೆನುಡಿಗಳಿಂದಲೂ ನಾವು ಪಡೆದುಕೊಳ್ಳಲು ಸಾಧ್ಯ. ಹೀಗಾಗಿ ಜ್ಞಾನ ಸಂಗ್ರಹವೇ ನಮ್ಮ‌ ಮುಖ್ಯ ಆದ್ಯತೆಯಾಗಬೇಕು ಎಂದರು.

ಈ ಪ್ರಪಂಚದಲ್ಲಿ ಶ್ರೇಷ್ಠವಾದುದು ನೈತಿಕತೆ ಹಾಗೂ ಇದು ಶಾಶ್ವತವಾದದ್ದು. ಈ ನೈತಿಕತೆಯ ಮೂಲಕವೇ ಚಾರಿತ್ರ್ಯದ ನಿರ್ಮಾಣವಾಗಬೇಕು. ಅದರಿಂದ ಮನಸ್ಸು, ಸಮಾಜ, ದೇಶ, ವಿಶ್ವದಲ್ಲಿ ಶಾಂತಿ ಹಾಗೂ ಸಹಬಾಳ್ವೆ ಸಾಧ್ಯವಾಗುತ್ತದೆ ಎಂದರು.

ಕ್ರೈಸ್ತ ಧರ್ಮದಲ್ಲಿ ಧರ್ಮ ಸಮನ್ವಯದ ಕುರಿತು ಬಸ್ರಿಕಟ್ಟೆಯ ಧರ್ಮಗುರು ಫಾ. ಮಾರ್ಸೆಲ್ ಪಿಂಟೋ ಅವರು, ಇಸ್ಲಾಂ ಮತ್ತು ಭಾರತೀತ ಭಾವೈಕ್ಯದ ಬಗ್ಗೆ ವಿಜಯಪುರ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಹಾಸಿಂಪೀರ ಇ ವಾಲೀಕರ ಅವರು, ಜೈನ ಧರ್ಮದಲ್ಲಿ ಸಾಮರಸ್ಯದ ವಿಚಾರವಾಗಿ ಮೂಡಬಿದರೆಯ ವಾಗ್ಮಿ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.

ಹೇಮಾವತಿ ವೀ.ಹೆಗ್ಗಡೆ, ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು‌

ಸಚಿವೆಯನ್ನು ಕ್ಷೇತ್ರದ ಪರವಾಗಿ ಡಾ. ಹೆಗ್ಡಡೆಯವರು ಸನ್ಮಾನಿಸಿದರು. ಧರ್ಮಸ್ಥಳ ಗ್ರಾಮ ಪಂ.ಅಭಿವೃದ್ಧಿ ಅಧಿಕಾರಿ ಉಮೇಶ್ ಗೌಡ ವಂದಿಸಿದರು. ಉಪನ್ಯಾಸಕ ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!