ಹೊಸದಿಗಂತ ವರದಿ,ಚಿಕ್ಕಮಗಳೂರು:
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾನೂ ದತ್ತ ಮಾಲೆ ಧರಿಸಿ ಬರುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ. ಅವರ ಹೇಳಿಕೆ ಸಿಎಂ ಸಿದ್ದರಾಮಯ್ಯ ಅವರಿಗೂ ಮಾದರಿ ಆಗಲಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ದತ್ತಮಾಲೆ ಧರಿಸುವುದಾಗಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮಾಜ ನಿರೀಕ್ಷೆ ಮಾಡುವುದೇ ಇದನ್ನ. ನಾವು ಹಿಂದೂ ಎಂದು ಹೇಳಿಕೊಳ್ಳಲು ಗರ್ವಪಡಬೇಕು. ಕುಮಾರಸ್ವಾಮಿ ಮಾತ್ರವಲ್ಲ ಈಗಿನ ಮುಖ್ಯಮಂತ್ರಿಗಳೂ ಇದನ್ನೇ ಮಾಡಲಿ ಎಂದರು.
ನಾನು ಹಿಂದು ಅಲ್ಲವೇ? ನನ್ನ ಹೆಸರಲ್ಲೇ ಸಿದ್ದರಾಮ ಇದ್ದಾನೆ ಎಂದು ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದನ್ನೂ ನಾನು ಗಮನಿಸಿದ್ದೇನೆ. ಅವರೂ ಮಾಲೆ ಹಾಕಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಬಲ ಬಂದಂತಾಗುತ್ತದೆ. ಅವರು ಮಾಲೆ ಹಾಕಿದರೆ ಜಮೀರ್ ಅಹಮದ್ ಸಹ ಮಾಲೆ ಹಾಕೇ ಹಾಕುತ್ತಾರೆ. ಆಗ ಸತ್ಯವನ್ನು ಎತ್ತಿ ಹಿಡಿದಂತಾಗುತ್ತದೆ ಎಂದರು.
ನಾವು ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೂ ಹೆದರಬೇಕಿಲ್ಲ. ಯಾರೂ ಸಹ ಚುನಾವಣೆ ಸಂದರ್ಭದ ಹಿಂದೂಗಳಾಗಬಾರದು. ಹಿಂದುತ್ವದ ವಿಚಾರ ಬಂದಾಗ ಹಿಂದೆ ತಿರುಗಿ ನೋಡಲೇ ಬಾರದು. ಆ ರೀತಿ ಭಾವನೆ ವ್ಯಕ್ತಪಡಿಸಬೇಕು. ನಾವು ಬರೇ ಬಿಜೆಪಿ, ಜನತಾದಳ ಅಷ್ಟೇ ಅಲ್ಲ ಕಾಂಗ್ರೆಸ್‌ನವರಿಗೂ ಆಹ್ವಾನ ಕೊಡುತ್ತೇವೆ. ಅವರೂ ಬರಲಿ, ಸೂರ್ಯ ಚಂದ್ರ ಇರುವುದೆಷ್ಟು ಸತ್ಯವೋ ಅಷ್ಟೇ ದಾಖಲೆಗಳ ಪ್ರಕಾರ ದತ್ತಾತ್ರೇಯ ಪೀಠವೇ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ ಎಂದರು.
ನಾವು ಬಹಳ ವರ್ಷಗಳಿಂದ ಇದನ್ನು ಹೇಳುತ್ತಿದ್ದೇವೆ. ನಮಗೂ ಬಾಬಾಬುಡನ್‌ಗೂ ಸಂಬಂಧವೇ ಇಲ್ಲ. ಇಲ್ಲಿರುವ ಆಸ್ತಿಯನ್ನು ಕಬಳಿಸಲು ಇಲ್ಲಿಗೆ ಬಂದು ಆಕ್ರಮಿಸಿಕೊಂಡು ಕುಳಿತಿದ್ದಾರೆ ಎಂದು ಹೇಳಿದರು.
ಮಾಲೆ ಹಾಕಿದ ಕೂಡಲೇ ಜಾತ್ಯತೀತತೆಗೆ ಧಕ್ಕೆ ಬರುವುದಿಲ್ಲ. ಹಿಂದೂ ಆಗಿ ಹುಟ್ಟಿದವನು ಮಾಲೆ ಹಾಕುವುದು, ವೀಭೂತಿ ಬಳಿಯುವುದು ಎಲ್ಲವೂ ಪರಂಪರೆಯ ಭಾಗ. ನಮ್ಮದಲ್ಲದ ಆಚರಣೆಗಳನ್ನೇ ಓಟಿನಾಸೆಗಾಗಿ ಮಾಡುವ ಜನರಿದ್ದಾರೆ. ಹಾಗಿರುವಾಗ ನಮ್ಮ ಆಚರಣೆ ಮಾಡುವುದರಿಂದ ತಪ್ಪೇನು ಎಂದು ಪ್ರಶ್ನಿಸಿದರು.