ಜೇನುಕೃಷಿಯಲ್ಲಿ ತೊಡಗಿ ಸಿಹಿ ಯಶಸ್ಸು ಪಡೆದ ಕಾಶ್ಮೀರಿ ಯುವಕನ ಯಶೋಗಾಥೆ ಓದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ದಿನ‌ ಬೆಳಗಾದರೆ ಗುಂಡಿನ ಮೊರೆತವನ್ನಷ್ಟೇ ಕೇಳಿಸಿಕೊಳ್ಳುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಈಗ ಸಾಕಷ್ಟು ಬದಲಾವಣೆ ಕಂಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಫಲವಾಗಿ ರಾಜ್ಯ ಹಲವು ಕ್ಷೇತ್ರದಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಸ್ವಯಂ ಉದ್ಯೋಗ ಕೈಗೊಳ್ಳುವ ಯವಜನರಿಗೆ ಸಾಕಷ್ಟು ಪ್ರೋತ್ಸಾಹವು ಲಭ್ಯವಾಗುತ್ತಿದೆ. ರಾಜ್ಯದ ಕಥುವಾ ಜಿಲ್ಲೆಯ ಹೀರಾನಗರದ ಗಡಿ ಪ್ರದೇಶದಲ್ಲಿ ಹಲವಾರು ಯುವಕರು ಜೇನು ಉತ್ಪಾದನಾ ವ್ಯವಹಾರದಲ್ಲಿ ತೊಡಗಿಕೊಂಡು ಲಾಭ ಗಳಿಸುತ್ತಿದ್ದಾರೆ. ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಣಿವೆ ರಾಜ್ಯದಲ್ಲಿ ಜೇನುಕೃಷಿಯಲ್ಲಿ ಯಶಸ್ಸು ಕಂಡವರಲ್ಲಿ ಸುರೇಶ್ ಕುಮಾರ್ ಒಬ್ಬರು. ಕಳೆದ ಕೆಲವು ವರ್ಷಗಳಿಂದ ಜೇನು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೃಷಿ ಇಲಾಖೆಯಿಂದ ಸಬ್ಸಿಡಿ ಪಡೆದು ಖರೀದಿಸಿದ ಐದು ಜೇನು ಪೆಟ್ಟಿಗೆಗಳಿಂದ ಆರಂಭಿಸಿ ಇಂದು 1000ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ಹೊಂದಿದ್ದಾರೆ. ಅದರೊಂದಿಗೆ, ಕುಮಾರ್ ಅವರು ಜೇನು ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಅವರು ದಿನಕ್ಕೆ 5-6 ಕ್ವಿಂಟಾಲ್ ಜೇನುತುಪ್ಪವನ್ನು ಉತ್ಪಾದಿಸುತ್ತಾರೆ. ಇದೇ ಮಾದರಿಯಲ್ಲಿ ಜೇನು ಕೃಷಿಯಲ್ಲಿ ತೊಡಗಿಕೊಂಡಿರುವ ಹಲವಾರು ಯುವಕರು ಸಿಹಿ ಯಶಸ್ಸನ್ನು ಅನುಭವಿಸುತ್ತಿದ್ದಾರೆ.
ಸುರೇಶ್ ಅವರ‌ ಜೇನು ಘಟಕದಲ್ಲಿ ಸುಮಾರು 12 ವಿಧದ ಜೇನುತುಪ್ಪವನ್ನು ಸಂಸ್ಕರಿಸಲಾಗುತ್ತದೆ. ಪ್ರಸ್ತುತ ಕುಮಾರ್ ಅವರು ವಾರ್ಷಿಕ 80-90 ಲಕ್ಷ ವಹಿವಾಟು ನಡೆಸುತ್ತಿದ್ದು, 10-15 ಲಕ್ಷ ಲಾಭ ಗಳಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುರೇಶ್ ಕುಮಾರ್,  ‘ನಾನು ಜೇನು ಉತ್ಪಾದನೆ ಆರಂಭಿಸಿದಾಗ ನಾನು ಬಯಸಿದ ದರ ಸಿಗಲಿಲ್ಲ. ವ್ಯಾಪಾರಿಗಳು ನಮ್ಮ ಜೇನುತುಪ್ಪವನ್ನು ಅಗ್ಗದ ದರದಲ್ಲಿ ಖರೀದಿಸುತ್ತಿದ್ದರು. ಹಾಗಾಗಿ ನಾನೇ ಜೇನು ಮಾರಾಟ ಆರಂಭಿಸಬೇಕು ಎಂದುಕೊಂಡೆ ಎನ್ನುತ್ತಾರೆ.
ಕುಮಾರ್ ಸ್ವತಃ ಉದ್ಯೋಗ ಮಾಡುವುದರ ಜೊತೆಗೆ ತನ್ನ ಪ್ರದೇಶದಲ್ಲಿ ಸುಮಾರು 25-30 ಜನರಿಗೆ ಉದ್ಯೋಗ ನೀಡಿದ್ದಾರೆ.
ಕುಮಾರ್ ಅವರ ಘಟಕದ ಕಾರ್ಯಕರ್ತ ಶಶಿಪಾಲ್ ಮಾತನಾಡಿ, ‘ಜೇನು ಸಂಸ್ಕರಣಾ ಘಟಕ ಸ್ಥಾಪನೆಯಿಂದ ಪ್ರಥಮವಾಗಿ ಜನರಿಗೆ ಉದ್ಯೋಗ ದೊರೆಯುತ್ತಿದೆ. ಮತ್ತೊಂದು ಸಂಗತಿಯೆಂದರೆ ಜೇನು ಸಾಕಾಣಿಕೆಯಲ್ಲಿ ಭಾಗವಹಿಸಲು ಮಹಿಳೆಯರಿಗೂ ತರಬೇತಿ ನೀಡಲಾಗುತ್ತಿದೆ. ಅನೇಕ ಮಹಿಳೆಯರು ಜೇನು ಉತ್ಪಾದನೆಯಲ್ಲಿ ತೊಡಗಿದ್ದಾರೆ’ ಎಂದರು. ಮತ್ತೊಬ್ಬ ಕಾರ್ಮಿಕ ರಾಮ್ ಕ್ರಿಶನ್, ‘ನಾವು ಜೇನು ಹೊರತೆಗೆಯುವಿಕೆ, ಜೇನು ಹುಳಗಳನ್ನು ಕೂರಿಸುವುದು ಮತ್ತು ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸುವಲ್ಲಿ ತೊಡಗಿಸಿಕೊಂಡಿದ್ದೇವೆ. ನಾನು ಈ ಕೆಲಸ ಮಾಡುವುದನ್ನು ತುಂಬಾ ಇಷ್ಟಪಡುತ್ತೇನೆ ಎನ್ನುತ್ತಾರೆ.
ಕುಮಾರ್ ಅವರು ಸಹಕಾರ ಸಂಘವನ್ನು ಅಭಿವೃದ್ಧಿಪಡಿಸಿದ್ದಾರೆ, ಅದರಲ್ಲಿ ಸುಮಾರು 200 ಜನರು ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸ್ಥಳೀಯರು ಮಾತ್ರವಲ್ಲದೆ ಇತರ ರಾಜ್ಯಗಳಿಂದಲೂ ಬಂದವರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹುಲ್ಲುಗಾವಲುಗಳು, ತೋಟಗಳು, ಕಾಡುಪ್ರದೇಶಗಳು ಮತ್ತು ಉದ್ಯಾನಗಳಿಂದ ಸುತ್ತುವರೆದಿರುವ ಪ್ರದೇಶಗಳಲ್ಲಿ ಜೇನುನೊಣಗಳು ಸಂಗ್ರಹಿಸುವ ಮಕರಂದವನ್ನು ವಿಶ್ವದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಇವೆಲ್ಲವುಗಳ ತವರು. ಅದು ಭೂಮಿ ಮೇಲಿನ ಸ್ವರ್ಗ ಸಾದೃಶ ಸ್ಥಳ. ಆದ್ದರಿಂದ ಕಣಿವೆ ರಾಜ್ಯದಲ್ಲಿ ಉತ್ಪತ್ತಿಯಾಗುವ ಜೇನುತುಪ್ಪಕ್ಕೆ ಭರಪೂರ ಬೇಡಿಕೆ ಇದೆ. ಅಲ್ಲದೆ ಕಾಶ್ಮೀರದ ಭೂಮಿಯಲ್ಲಿ ಕೀಟನಾಶಕಗಳ ಬಳಕೆಯೂ ಕಡಿಮೆ. ಈ ಸಂಗತಿಗಳು ಸಾವಯವ ಜೇನುತುಪ್ಪವನ್ನು ಉತ್ಪಾದಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!