ರೋಹಿತ್ ಶರ್ಮರ 264 ರನ್‌ ವಿಶ್ವದಾಖಲೆ ಮುರಿದ ಜಗದೀಶನ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮಿಳುನಾಡು ತಂಡದ ವಿಕೆಟ್‌ ಕೀಪರ್ ಬ್ಯಾಟರ್ ನಾರಾಯಣ್ ಜಗದೀಸನ್ ಸೋಮವಾರ ವಿಜಯ್‌ ಹಜಾರೆ ಟ್ರೋಫಿಯಲ್ಲಿ ವಿಶ್ವದಾಖಲೆ ಬರೆದರು. ಏಕದಿನ ಸ್ವರೂಪದಲ್ಲಿ ಸತತವಾಗಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾ ಕ್ರಿಕೆಟ್ ದಂತಕಥೆ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿದರು. ಜೊತೆಗೆ  ಬರೋಬ್ಬರಿ 277 ರನ್ ಸಿಡಿಸುವ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾಖಲೆಯನ್ನೂ ಮುರಿದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ತಮಿಳುನಾಡು ಪಂದ್ಯದ ವೇಳೆ ಜಗದೀಸನ್ ಈ ಸಾಧನೆಯನ್ನು ಬರೆದಿದ್ದಾರೆ. ಜಗದೀಸನ್ ಅವರು 141 ಎಸೆತಗಳ ಸ್ಫೋಟಕ ಇನ್ನಿಂಗ್ಸ್ ನಲ್ಲಿ 25 ಬೌಂಡರಿ ಮತ್ತು 15 ಸಿಕ್ಸರ್‌ಗಳನ್ನು ಒಳಗೊಂಡ 277 ರನ್ ಗಳಿಸಿದರು. ಜಗದೀಶನ್ ರ 277 ರನ್ ಕೂಡ 50-ಓವರ್ ಮಾದರಿಯಲ್ಲಿ ಈವರೆಗಿನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಇದು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಅವರ ಸತತ ಐದನೇ ಶತಕವಾಗಿದ್ದು, ಇದರೊಂದಿಗೆ ಅವರು ಸಂಗಕ್ಕಾರ ಅವರ ದಾಖಲೆಯನ್ನು ಮುರಿದಿದ್ದಾರೆ. ಸಂಗಕ್ಕಾರ ಈ ಹಿಂದೆ 2015 ಕ್ರಿಕೆಟ್ ವಿಶ್ವಕಪ್‌ನಲ್ಲಿ ಸತತ ನಾಲ್ಕು ಶತಕಗಳನ್ನು ಸಿಡಿಸಿದ್ದರು.
ಈ ಟೂರ್ನಿಯಲ್ಲಿ ಜಗದೀಸನ್ ಹರಿಯಾಣ ವಿರುದ್ಧ 128(123), ಆಂಧ್ರ ಪ್ರದೇಶ ವಿರುದ್ಧ 114*,  ಛತ್ತೀಸ್‌ಗಢ ವಿರುದ್ಧ 107  ಮತ್ತು ಗೋವಾ ವಿರುದ್ಧ 168 ರನ್‌ ಸಿಡಿಸುವ ಮೂಲಕ ಸತತ ನಾಲ್ಕು ಶತಕ ಸಿಡಿಸಿದ್ದರು. ಅವರ ಬ್ಯಾಟಿಂಗ್ ಭರ್ಜರಿ ಪ್ರದರ್ಶನದಿಂದ ಅರುಣಾಚಲ ಪ್ರದೇಶದ ಮೇಲೆ ಸವಾರಿ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 506/2 ದೈತ್ಯ ಮೊತ್ತವನ್ನು ಪೇರಿಸಿತು. ಜಗದೀಶನ್ ಅವರ ಆರಂಭಿಕ ಪಾಲುದಾರ ಸಾಯಿ ಸುದರ್ಶನ್ 102 ಎಸೆತಗಳಲ್ಲಿ 154 ರನ್ ಗಳಿಸಿದರು.
ಈ ಹಿಂದೆ ರೋಹಿತ್‌ ಶರ್ಮಾ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ 2014ರ ನವೆಂಬರ್‌ 13ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಗರಿಷ್ಠ ವೈಯಕ್ತಿಕ ಸ್ಕೋರ್‌ ದಾಖಲಿಸಿದ್ದರು. ಅವರು ಕೇವಲ 173 ಎಸೆತಗಳಲ್ಲಿ 33 ಫೋರ್‌ ಮತ್ತು 9 ಭರ್ಜರಿ ಸಿಕ್ಸರ್‌ಗಳಿದ್ದ 264 ರನ್ ಚಚ್ಚಿದ್ದರು. ಇದು ಏಕದಿನ ಕ್ರಿಕೆಟ್ ನಲ್ಲಿ ಭಾರತೀಯ ಬ್ಯಾಟರ್ ಒಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿತ್ತು. ಇದೀಗ ಜಗದೀಶನ್‌ ಆ ದಾಖಲೆಯನ್ನು ಮೀರಿದ್ದಾರೆ.
ಜಗದೀಸನ್ ಪ್ರಸ್ತುತ ಪಂದ್ಯಾವಳಿಯಲ್ಲಿ ಟಾಪ್ ರನ್ ಸ್ಕೋರರ್ ಆಗಿದ್ದಾರೆ. ಅವರು 6 ಪಂದ್ಯಗಳಿಂದ 624 ರನ್ ಗಳಿಸಿದ್ದಾರೆ. ಐಪಿಎಲ್ಗ ನಲ್ಲಿ ಅವರನ್ನು ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆ ಮಾಡಿತು ಮತ್ತು ಮುಂದಿನ ತಿಂಗಳು ಮಿನಿ ಹರಾಜಿನಲ್ಲಿ ಜಗದೀಸನ್ ಭಾರಿ ಮೊತ್ತಕ್ಕೆ ಹೋಗುವ ನಿರೀಕ್ಷೆಗಳಿವೆ.

ಏಕದಿನದಲ್ಲಿ ಅತ್ಯಧಿಕ ಅತ್ಯಧಿಕ ಸ್ಕೋರ್‌ ಸಿಡಿಸಿದವರು:
277 – ಎನ್ ಜಗದೀಸನ್ (ಟಿಎನ್) ವಿರುದ್ಧ ಅರುಣಾಚಲ ಪ್ರದೇಶ, 2022
268 – ಅಲಿಸ್ಟೇರ್ ಬ್ರೌನ್ (ಸರ್ರೆ) ವಿರುದ್ಧ ಗ್ಲಾಮೊರ್ಗಾನ್, 2002
264 – ರೋಹಿತ್ ಶರ್ಮಾ (ಭಾರತ) ವಿರುದ್ಧ ಶ್ರೀಲಂಕಾ, 2014
257 – ಡಿ’ಆರ್ಸಿ ಶಾರ್ಟ್ (ವೆಸ್ಟ್ ಆಸ್) ವಿರುದ್ಧ ಕ್ವೀನ್ಸ್‌ಲ್ಯಾಂಡ್, 2018
248 – ಶಿಖರ್ ಧವನ್ (ಭಾರತ ಎ) ವಿರುದ್ಧ ದಕ್ಷಿಣ ಆಫ್ರಿಕಾ ಎ, 2013

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!